ಯಲ್ಲಾಪುರ: ಏಕಕಾಲಕ್ಕೆ ಅನೇಕ ವಿಷಯಗಳಲ್ಲಿ ಲಕ್ಷ್ಯವನ್ನು ಕೇಂದ್ರಿಕರಿಸುವ ಕಲೆಯನ್ನು ಆಹ್ವಾನಿಸುವ ಅಪರೂಪದ “ಅಷ್ಟಾವಧಾನ” ಕಾರ್ಯಕ್ರಮ ನಾಯ್ಕನಕೆರೆಯ ಶಾರದಾಂಬಾ ದೇವಿ ಭವನದಲ್ಲಿ ಬುಧವಾರ ನಡೆಯಿತು.
ಅವಧಾನಿ ಗಣೇಶ ಕೊಪ್ಪಲತೋಟ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಅವರು, ಅಷ್ಟಾವಧಾನದ ಪರಿಚಯ ಹಾಗೂ ವಿಶೇಷತೆಗಳ ಬಗ್ಗೆ ಸಭೆಗೆ ತಿಳಿಸಿದರು. ಅಷ್ಟಾವಧಾನ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಪದಗಳ ನಡುವಿನ ಸವಾಲಿನ ಆಟವಾಗಿದೆ. ನಿಷೇಧಾಕ್ಷರಿ, ಸಮಸ್ಯಾಪೂರ್ಣ, ದತ್ತಪದಿ, ಚಿತ್ರ ಕವಿತೆ, ಆಶು ಕವಿತೆ, ಕಾವ್ಯ ವಾಚನ, ಸಂಖ್ಯಾಬಂಧ ಹಾಗೂ ಅಪ್ರಸ್ತುತ ಪ್ರಸಂಗ ವಿಭಾಗದ ಬಗ್ಗೆ ಅವರು ಮಾಹಿತಿ ನೀಡಿದರು. ಸಂಸ್ಕøತ ಭಾಷೆ ಉಳಿದ ಭಾಷೆಗೆ ಮಾತೃಭಾಷೆಯಾಗಿದೆ ಎಂಬುದನ್ನು ದತ್ತಪದಿಯ ಮೂಲಕ ಅವರು ವಿವರಿಸಿದರು. ನಂತರ ಕಾವ್ಯ ವಾಚನದ ಮೂಲಕ ತಾಯಿ ಹಾಗೂ ಮಗನ ಸಂಬಂಧದ ಮಹತ್ವದ ಬಗ್ಗೆ ತಿಳಿಸಿದರು. ಸಂಸ್ಕೃತ ಹಾಗೂ ಹಳೆಗನ್ನಡ ಪದಗಳೊಂದಿಗೆ ನಡೆದ ಈ ಕಾರ್ಯಕ್ರಮ ಕನ್ನಡ ಸಾಹಿತ್ಯದ ಹಲವು ಮಜಲುಗಳಿಗೆ ಸಾಕ್ಷಿಯಾಯಿತು.
ಪ್ರಚ್ಛಕರಾಗಿ ವಿದ್ವಾಂಸರಾದ ರಾಜಶೇಖರ ಧೂಳಿ, ವಿಘ್ನೇಶ್ವರ ಭಟ್ಟ ಬಿಸಗೋಡ, ಮಹೇಶ ಭಟ್ಟ ಇಡಗುಂದಿ, ನರಸಿಂಹ ಭಟ್ಟ ಕವಡಿಕೆರೆ, ಗಣಪತಿ ಭಟ್ಟ ಕೋಲಿಬೇಣ, ತಿಮ್ಮಣ್ಣ ಭಟ್ಟ ಬೆಂಗಳೂರು, ವೆಂಕಟ್ರಮಣ ಭಟ್ಟ ಚಂದ್ಗುಳಿ, ಪೂರ್ಣಿಮಾ ಉಪಾಧ್ಯಾಯ ಜವಾಬ್ದಾರಿ ನಿಭಾಯಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.
ವಿದ್ಯಾರ್ಥಿಗಳಾದ ಸುಜನ್ಯ ನಾಯ್ಕ ಹಾಗೂ ಶ್ರೀಗಂಗಾ ಭಟ್ಟ ಪ್ರಾರ್ಥಿಸಿದರು. ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದಪ್ರಾಚಾರ್ಯರಾದ ಡಾ. ಎಸ್.ಎಲ್ ಭಟ್ಟ ಗಣ್ಯರನ್ನು ಸ್ವಾಗತಿಸಿ, ಪರಿಚಯಿಸಿದರು. ವೀಣಾ ಭಾಗ್ವತ್ ಅವರು ನಿರ್ವಹಿಸಿದರು. ರವೀಂದ್ರ ಶರ್ಮ ಅವರು ಸಂಘಟಿಸಿದ್ದರು. ಬಾಲಚಂದ್ರ ಭಟ್ಟ ಅವರು ಗೌರವ ಸಮರ್ಪಣೆ ಮಾಡಿದರು.