ಕಾರವಾರ: ಪ್ರಖ್ಯಾತ ರಿಯಾಲಿಟಿ ಶೋ ಸೋನಿ ಟಿವಿಯ ಇಂಡಿಯಾಸ್ ಗಾಟ್ ಟ್ಯಾಲೆಂಟ್‍ಗೆ ಮಂಗಳೂರಿನ ಪಿಳಿ ಡ್ಯಾನ್ಸ್ ತಂಡ ಮೊದಲ ರೌಂಡ್‍ನಲ್ಲಿ ಆಯ್ಕೆಯಾಗಿದ್ದು, ಈ ತಂಡದಲ್ಲಿ ಕಾರವಾರದ ಯುವಕನೂ ಇರುವುದು ವಿಶೇಷವಾಗಿದೆ.
ನಗರದ ಬ್ರಾಹ್ಮಣಗಲ್ಲಿಯ ದರ್ಶನ್ ಶೇಟ್ ಈ ಪಿಲಿ ಡ್ಯಾನ್ಸ್ ತಂಡವಾದ ಬಿರುವೆರ್ ಕುಡ್ಲದಲ್ಲಿದ್ದಾನೆ. 20 ಮಂದಿಯ ಈ ತಂಡದ ನೇತೃತ್ವವನ್ನು ಕಿಶೋರ್ ಅಮನ್ ವಹಿಸಿಕೊಂಡಿದ್ದು, ಸುಮಿತ್ ಅಮೀನ್ ಮತ್ತು ಕಿಶೋರ್ ಅಮನ್ ಕೊರಿಯೋಗ್ರಫಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಡ್ಯಾನ್ಸ್ ತರಬೇತಿ ಪಡೆದಿರುವ ದರ್ಶನ್ ಅವರ ಬಿರುವೆರ್ ಕುಡ್ಲ ತಂಡ ಮುಂಬೈಗೆ ತೆರಳಿ, ಇಂಡಿಯಾಸ್ ಗಾಟ್ ಟ್ಯಾಲೆಂಟ್‍ನ ಮೊದಲ ರೌಂಡ್‍ನಲ್ಲಿ ಭಾಗವಹಿಸಿದೆ. ಅಲ್ಲಿ ತಂಡ ಆಯ್ಕೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಎರಡನೇ ರೌಂಡ್ ಕೂಡ ನಡೆಯಲಿದೆ. ಅಲ್ಲಿಯೂ ಕೂಡ ಆಯ್ಕೆಯಾಗುವ ವಿಶ್ವಾಸವನ್ನು ದರ್ಶನ್ ಹೊಂದಿದ್ದಾರೆ.
ಕಾರವಾರದ ಬ್ರಾಹ್ಮಣಗಲ್ಲಿಯ ಪ್ರಭಾಕರ್ ಶೇಟ್ ಮತ್ತು ಸವಿತಾ ಶೇಟ್ ದಂಪತಿಯ ಪುತ್ರನಾಗಿರುವ ದರ್ಶನ್, ಕಾರವಾರದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಕೇಳಿಸ್ಕೋ ಎಂಬ ರ್ಯಾಪ್ ಗೀತೆಯನ್ನೂ ಅವರು ಇತ್ತೀಚೆಗೆ ಯೂಟ್ಯೂಬ್‍ನಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಬಿರುವೆರ್ ಕುಡ್ಲ ಸೇರಿರುವ ದರ್ಶನ್, ಇಂಡಿಯಾಸ್ ಗಾಟ್ ಟ್ಯಾಲೆಂಟ್‍ನ ವೇದಿಕೆ ಹತ್ತಿದ್ದಾರೆ.