ಕಾರವಾರ: ಕಾರವಾರ ಬಸ್ ನಿಲ್ದಾಣದಿಂದ ನಗರ ವ್ಯಾಪ್ತಿಯ ವಿವಿಧ ಪ್ರದೇಶಗಳು ಸೇರಿದಂತೆ ಗ್ರಾಮಾಂತರ ಭಾಗಗಳಿಗೆ ತೆರಳುವ ಬಸ್ ಸಂಚಾರವನ್ನು ತೀವ್ರ ಕಡಿತಗೊಳಿಸಿದ್ದು, ಸಾರ್ವಜನಿಕರು ಆಟೋ ಹಾಗೂ ಖಾಸಗಿ ವಾಹನಗಳನ್ನು ಅವಲಂಬಿಸಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕೊರೊನಾ ಕರಿನೆರಳು ಸಾರಿಗೆ ಇಲಾಖೆಯ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದ್ದು, ಹಲವು ಭಾಗಗಳ ಬಸ್ ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿದೆ. ಇದರಿಂದ ತಾಲೂಕಿನ ಸುಂಕೇರಿ, ಕೋಡಿಬಾಗ, ಮಾಜಾಳಿ, ಕಿನ್ನರ, ಸಿದ್ಧರ, ದೇವಳಮಕ್ಕಿ ಸೇರಿದಂತೆ ವಿವಿಧ ಭಾಗಗಳ ಬಡಜನತೆ ಪರದಾಡುವಂತಾಗಿದ್ದು, ಬಸ್ ಸಂಚಾರ ಹೆಚ್ಚಿಸಬೇಕೆಂಬ ಕೂಗು ಕೇಳತೊಡಗಿದೆ.
ಸಾರ್ವಜನಿಕರ ಅಭಿಪ್ರಾಯ:
ತಾಲೂಕಿನ ಸುಂಕೇರಿ, ಕಡವಾಡ, ಕೋಡಿಬಾಗ ಸೇರಿದಂತೆ ವಿವಿಧ ಪ್ರದೇಶಗಳಿಗೆ ಈ ಮೊದಲು ಅರ್ಧಗಂಟೆಗೊಮ್ಮೆಯಂತೆ ದಿನಕ್ಕೆ ಹತ್ತಾರು ಬಸ್‍ಗಳನ್ನು ಬಿಡಲಾಗುತ್ತಿತ್ತು. ಆದರೆ ಸಾರಿಗೆ ಇಲಾಖೆಯು ವಿವಿಧ ಕಾರಣಗಳಿಂದ ಸದ್ಯ ಬಸ್ ಸಂಚಾರವನ್ನು ತೀವ್ರ ಕಡಿತಗೊಳಿಸಿದ್ದು, ದಿನಕ್ಕೆ ಮೂರು ಬಸ್‍ಗಳನ್ನು ಮಾತ್ರ ಬಿಡಲಾಗುತ್ತಿದೆ. ಇದರಿಂದ ಬಡ ಜನತೆ ಆಟೋ ಸೇರಿದಂತೆ ಇನ್ನಿತರ ಬಾಡಿಗೆ ವಾಹನಗಳನ್ನು ಅವಲಂಬಿಸಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಬಡ ಮೀನುಗಾರ ಮಹಿಳೆಯರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಈ ನಡುವೆಯೇ ಸಾರಿಗೆ ಇಲಾಖೆ ಬಸ್ ಟಿಕೇಟ್ ದರವನ್ನೂ ಹೆಚ್ಚಿಸಿದ್ದು, ಸಾರ್ವಜನಿಕರಿಗೆ ಇದು ಬಿಸಿ ತುತ್ತಾಗಿ ಪರಿಣಮಿಸಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ:
ಕೊರೊನಾ ಮಹಾಮಾರಿಯಿಂದ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಸಾರ್ವಜನಿಕರ ತಿರುಗಾಟವೂ ತೀವ್ರ ವಿರಳವಾಗಿದೆ. ಬಸ್‍ಗಳಲ್ಲಿ ಸಂಚರಿಸುವವರ ಸಂಖ್ಯೆಯೂ ಸಾಕಷ್ಟು ಇಳಿಮುಖವಾಗಿದೆ. ಕೆಲವು ಪ್ರದೇಶಗಳಿಗೆ ಬಸ್ ಸಂಚರಿಸಿದರೂ ಜನರಿಲ್ಲದೇ 5-6 ಲೀಟರ್ ಡಿಸೇಲ್ ಸುಟ್ಟು ವಾಪಸ್ ಮರಳಿದ ಘಟನೆ ಸಾಕಷ್ಟಿದೆ. ಇನ್ನು ಕೆಲವರು ಬಸ್ ತೆರಳುತ್ತಿದ್ದರೂ ಖಾಸಗಿ ವಾಹನ ಅಥವಾ ಆಟೋಗಳನ್ನೇ ಅವಲಂಬಿಸುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೇವಲ 3-4 ವಿದ್ಯಾರ್ಥಿಗಳು ಹಾಗೂ ಒಂದೆರಡು ಸಾರ್ವಜನಿಕರಿದ್ದರೂ ಅಂಥ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಬಸ್ ಸಂಚರಿಸುತ್ತಿದ್ದರೆ ಮಾತ್ರ ಸಾರ್ವಜನಿಕರು ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಬಸ್ ಸಂಚಾರವೇ ಇಲ್ಲದಿದ್ದರೆ ಬಸ್‍ಗಳಲ್ಲಿ ತೆರಳುವುದಾದರೂ ಹೇಗೆ? ಸುಂಕೇರಿ ಸೇರಿದಂತೆ ವಿವಿಧ ಭಾಗಗಳಿಗೆ ದಿನಕ್ಕೆ 2-3 ಬಸ್‍ಗಳನ್ನು ಮಾತ್ರ ಬಿಡಲಾಗುತ್ತಿದ್ದು, ಇದರಿಂದ ಬಡಜನತೆ ಪರದಾಡುವಂತಾಗಿದೆ. ಶೀಘ್ರದಲ್ಲೇ ಬಸ್ ಸಂಚಾರವನ್ನು ಹೆಚ್ಚಿಸಿ, ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು.
ನವೀನ ನಾಯ್ಕ (ಸಾಮಾಜಿಕ ಕಾರ್ಯಕರ್ತ)
ಕೊರೊನಾ ಬಳಿಕ ಜನರಿಲ್ಲದೇ, ಕೆಲವು ಪ್ರದೇಶಗಳ ಬಸ್ ಸಂಚಾರವನ್ನು ಕಡಿತಗೊಳಿಸಲಾಗಿದೆ. ಇನ್ನು, ಕೆಲವು ಭಾಗಗಳಿಗೆ ಬಸ್ ಸಂಚರಿಸುತ್ತಿದ್ದರೂ ಸಾರ್ವಜನಿಕರು ಖಾಸಗಿ ಹಾಗೂ ಬಾಡಿಗೆ ವಾಹನಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಬಸ್‍ಗಳಲ್ಲಿ ಜನರಿಲ್ಲದೇ, ಖಾಲಿ ಬಸ್ ಸಂಚರಿಸುವಂತಾಗಿದ್ದು, ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.