ಶಿರಸಿ: ತಾಲೂಕಿನ ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನದ ನೂತನ ಮಹಾಸ್ಯಂದನ ರಥದ ನಿರ್ಮಾಣಕ್ಕೆ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್ ಮತ್ತು ಪುತ್ರ ವಿಶ್ವನಾಥ ರಾಜಶೇಖರ ಒಡೆಯರ್ ತಮ್ಮ ಕುಟುಂಬದ ವತಿಯಿಂದ 5 ಲಕ್ಷದ 5 ಸಾವಿರದ ಐದು ನೂರ ಐವತ್ತೈದು ರೂಪಾಯಿಗಳ ಚೆಕ್’ನ್ನು ದೇಣಿಗೆಯಾಗಿ ಶ್ರೀ ಮಹಾಸ್ಯಂದನ ರಥ ನಿರ್ಮಾಣ ಸಮಿತಿಗೆ ಸೋಮವಾರ ನೀಡಿದರು.
ಚೆಕ್ ಸ್ವೀಕರಿಸಿದ ಆರ್ಥಿಕ ಸಮಿತಿಯ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಮಾತನಾಡಿ, 413 ವರ್ಷಗಳ ಇತಿಹಾಸವಿರುವ ರಥ ಶಿಥಿಲಾವಸ್ಥೆಯಲ್ಲಿದ್ದು ನೂತನ ರಥ ನಿರ್ಮಿಸುವುದು ಅನಿವಾರ್ಯವಾಗಿರುವುದರಿಂದ ಸುಮಾರು 3 ಕೋಟಿ ವೆಚ್ಚದಲ್ಲಿ ಮಹಾರಥ ನಿರ್ಮಾಣವಾಗಲಿದ್ದು ಈಗಾಗಲೇ ರಥ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ರಥ ನಿರ್ಮಾಣ ಕಾರ್ಯದಲ್ಲಿ ಭಕ್ತರಿಗೆ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಕೆಲವು ಪ್ರಾಯೋಜಕತ್ವವನ್ನು ಯೋಜಿಸಲಾಗಿದೆ ಅದರಂತೆ ರಾಜಶೇಖರ ಒಡೆಯರ್ ಕುಟುಂಬಸ್ಥರು ಒಂದು ದೊಡ್ಡ ಗಾಲಿ ನಿರ್ಮಾಣದ ಅಂದಾಜು ವೆಚ್ಚ 5 ಲಕ್ಷ ರೂ. ದೇಣಿಗೆಯಾಗಿ ನೀಡಿದ್ದಾರೆ ಅವರ ಕುಟುಂಬಕ್ಕೆ ಶ್ರೀ ಮಧುಕೇಶ್ವರ ಶುಭವನ್ನು ನೀಡಲಿ. ಈ ರೀತಿಯಲ್ಲಿ ಸೇವೆ ಸಲ್ಲಿಸಲಿಚ್ಚಿಸುವ ಭಕ್ತರು ಶ್ರೀ ಮಹಾಸ್ಯಂದನ ರಥ ನಿರ್ಮಾಣ ಸಮಿತಿಯನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಕಾರ್ಯಾಧ್ಯಕ್ಷ ದಯಾನಂದ ಭಟ್, ಪ್ರಕಾಶ ಬಂಗಳೆ, ಶಿವಕುಮಾರ ದೇಸಾಯಿ ಗೌಡ, ಶ್ರೀನಿಧಿ ಮಂಗಳೂರು, ದತ್ತಾತ್ರೇಯ ಭಟ್, ವಿಶ್ವನಾಥ ಒಡೆಯರ, ಗ್ರಾಪಂ ಸದಸ್ಯ ಅಶೋಕ ಪೊನ್ನಪ್ಪ, ಸುಧೀರ ನಾಯರ್ ಇದ್ದರು.