ಮುಂಡಗೋಡ: ನಂದಿಗಟ್ಟಾ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ರಸ್ತೆಗಳಲ್ಲಿ ದೊಡ್ಡ-ದೊಡ್ಡ ಹೊಂಡಗಳು ನಿರ್ಮಾಣವಾಗಿ ಮೃತ್ಯುಕೂಪಕ್ಕೆ ಆಹ್ವಾನಿಸುವಂತಾಗಿವೆ. ವಾಹನ ಸವಾರರು ಪ್ರತಿ ನಿತ್ಯ ಅಧಿಕಾರಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಿಂದ ನಂದಿಗಟ್ಟಾ ಗ್ರಾಮ 12 ಕಿ.ಮೀ ಇದ್ದು ಕ್ಯಾಂಪ್ ನಂ6 ರ ವರೆಗೆ ರಸ್ತೆ ಚನ್ನಾಗಿದ್ದು ನಂತರದ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಈ ರಸ್ತೆಯೂ ಕೆಂದಲಗೇರಿ, ಬಸ್ಸಾಪುರ, ಹುಲಿಹೊಂಡ, ಯರೇಬೈಲ್ ಉಗ್ಗಿನಕೆರಿಗೆ ಗ್ರಾಮಗಳಿಗೆ ಹೋಗುವ ಮುಖ್ಯ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಬೈಕ್ ಸವಾರರು ಮತ್ತು ವಾಹನ ಚಾಲಕರು ತಮ್ಮ ಎಡಗೈಯಲ್ಲಿ ಜೀವ ಹಿಡಿದುಕೊಂಡು ಸವಾರಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿದ್ದು ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ತುಂಬಾ ಅಡಚಣೆ ಉಂಟಾಗುತ್ತಿದೆ. ರಸ್ತೆಯಲ್ಲಿ ಬರುವಾಗ ಅತಿ ಜಾಗರೂಕತೆಯಿಂದ ಬರಬೇಕಾಗುತ್ತದೆ. ಕೊಂಚ ಯಾಮಾರಿದರೂ ದುರಂತ ಸಂಭವಿಸುವುದು ಕಟ್ಟಿಟ್ಟ ಬುತ್ತಿ. ಇದೇ ರಸ್ತೆಗಳಲ್ಲಿ ಹಲವು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿರುವ ಘಟನೆಗಳಿವೆ. ಈ ಗ್ರಾಮ ಮತ್ತು ಅಕ್ಕ-ಪಕ್ಕದ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಕಟಾವು ಮಾಡಿಕೊಂಡು ಹೋಗುವ ವಾಹನಗಳು ಈ ರಸ್ತೆಗೆ ಬರಲು ಹಿಂದೆಟು ಹಾಕುತ್ತಾರೆ. ಅಲ್ಲದೆ ಅತ್ತಿವೇರಿ, ಹನಗುಂದ, ಅಗಡಿ, ಉಗ್ಗಿನಕೇರಿ ಮತ್ತು ಇನ್ನಿತರ ಗ್ರಾಮದ ರಸ್ತೆಗಳು ಇದೆ ರೀತಿಯಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇಷ್ಟೆಲ್ಲ ತೊಂದರೆ ಇದ್ದರೂ ರಸ್ತೆ ದುರಸ್ತಿ ಮಾಡಿಸದೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ. ಸಂಬಂಧಪಟ್ಟ ಆಧಿಕಾರಿಗಳು ಒಮ್ಮೆ ಗಮನಹರಿಸಿ ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂಬುದು ಸಾರ್ವಜನಿಕರ ಕೂಗಾಗಿದೆ.
ಯಲ್ಲಪ್ಪ.ಎಚ್ ನಂದಿಗಟ್ಟಾ ಗ್ರಾಮಸ್ಥ : ನಾವು ಕೆಲಸದ ನಿಮಿತ್ತ ಇದೆ ಮಾರ್ಗದಲ್ಲಿ ಹೋಗಬೇಕಾಗುತ್ತದೆ. ರಸ್ತೆಗಳು ಹದಗೆಟ್ಟಿರುವುದರಿಂದ ವಾಹನ ಚಾಲನೆ ಮಾಡುವುದಕ್ಕೆ ಕಷ್ಟವಾಗುತ್ತದೆ. ಆದಷ್ಟು ಬೇಗ ರಸ್ತೆಯನ್ನು ದುರಸ್ತಿಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು.
ವಿನಾಯಕ.ಭಟ್, ಪಿಡಬ್ಲ್ಯುಡಿ ಎಇಇ : ಈ ರಸ್ತೆಗಳಲ್ಲಿ ಟಿಪ್ಪರ್ ಮತ್ತು ದೊಡ್ಡ-ದೊಡ್ಡ ವಾಹನಗಳು ಮಿತಿಮೀರಿ ಲೋಡ್ ಮಾಡಿಕೊಂಡು ಸಂಚಾರ ಮಾಡಿರುವುದ್ದರಿಂದ ಡಾಂಬರ ಕಿತ್ತು ಹೋಗಿದೆ. ಹಳೆಯ ರಸ್ತೆಯಾಗಿರುವುದರಿಂದ ತಾತ್ಕಲಿಕವಾಗಿ ರಸ್ತೆ ಮಾಡಲು ಬರುವುದಿಲ್ಲ. ಹೊಸದಾಗಿ ಡಾಂಬರೀಕಣ ಮಾಡಬೇಕಾಗುತ್ತದೆ. ಮತ್ತೊಂದು ಮಾರ್ಗವಾದ ಅಗಡಿ, ಹುನಗುಂದ ಮತ್ತು ಅತ್ತಿವೇರಿಯ ರಸ್ತೆಯನ್ನು ಶೀಘ್ರದಲ್ಲಿ ಡಾಂಬರೀಕಣ ಮಾಡಲಾಗುವುದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೆನೆ ಮುಂದಿನ ಬಜೆಟ್‍ನಲ್ಲಿ ಅನುದಾನ ನೀಡುವುದಾಗಿ ಹೇಳಿದ್ದಾರೆ.