
ಶಿರಸಿ: ಹಳ್ಳಿಯಗಳ ಜನತೆಗೂ ಗುಣಮಟ್ಟದ ಇಂಟರ್ ನೆಟ್ ಸೌಲಭ್ಯ ದೊರೆಯುವಂತಾಗಬೇಕು. ಈ ಕುರಿತಂತೆ ಸೌಲಭ್ಯ ಒದಗಿಸುವ ಸೇವಾ ಸಂಸ್ಥೆಗಳು ಗಮನಹರಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ನಗರದ ಟಿಎಂಎಸ್ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವರ್ಕ್ ಪ್ರಾಂ ಹೋಂ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ವಿಸ್ತರಣೆ, ಟಾವರ್ ನಿರ್ಮಾಣಕ್ಕೆ ಸರ್ಕಾರದಿಂದಲೂ ಸಹಾಯ ನೀಡಬೇಕು ಎಂಬುದು ಬಿಎಸ್‌ಎನ್‌ಎಲ್ ಮತ್ತು ಖಾಸಗಿಯವರ ಅಹವಾಲಾಗಿದೆ. ಈ ಹಿಂದೆಯೂ ಈ ಸೂಚನೆ ಬಂದಿತ್ತು. ಈ ಕುರಿತಂತೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಿದ್ದೇನೆ ಎಂದರು.
ನೆಟ್ವರ್ಕ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಜಾಸ್ತಿ ಇದೆ. ಬಿಎಸ್‌ಎನ್‌ಎಲ್ ಅನಾದಿ ಕಾಲದಿಂದಲೂ ಉತ್ತಮ ಸೇವೆ ನೀಡಿದೆ. ಆದರೆ, ಸೇವೆ ನಿರೀಕ್ಷೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಖಾಸಗಿಯವರು ತಮ್ಮ ಲಾಭ ನಷ್ಟ ಲೆಕ್ಕಾಚಾರ ಹಾಕುತ್ತಿದ್ದಾರೆ. ಖಾಸಗಿಯವರು 5 ಜಿ ಕಡೆ ಹೋದರೂ ಬಿಎಸ್‌ಎನ್‌ಎಲ್ ಇನ್ನೂ 3 ಜಿಯಲ್ಲಿದೆ. ವ್ಯವಸ್ಥೆ ಸುಧಾರಣೆಯ ಬಗ್ಗೆ ಬಿಎಸ್‌ಎನ್‌ಎಲ್ ಗಮನಹರಿಸಬೇಕು.
ವರ್ಕ್ ಪ್ರಾಂ ಹೋಂ ಕೊರೋನಾ ಕಾರಣದಿಂದ ಆರಂಭವಾಗಿದ್ದರೂ ಈ ವ್ಯವಸ್ಥೆ ತಾತ್ಕಾಲಿಕ ಅಲ್ಲ ಎಂಬುದನ್ನು ತೋರಿಸಿಕೊಡಬೇಕು. ನಮ್ಮಲ್ಲಿ ಮಾನವ ಶಕ್ತಿ ಸಂಪನ್ಮೂಲದ ಕೊರತೆ ಇಲ್ಲ. ಇದನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಯತ್ನವಾಗಬೇಕು ಎಂದರು.
ಚಾರ್ಟರ್ಡ್ ಅಕೌಂಟಂಟ್ ಎಸ್ ಜಿ ಹೆಗಡೆ ಮಾತನಾಡಿ, ಕಳೆದ 30 ವರ್ಷಗಳಿಂದ ಮಾಹಿತಿ ತಂತ್ರಜ್ನಾನ ಕ್ಷೇತ್ರ ಬದಲಾವಣೆ ಆಗಿದೆ. ವಿದ್ಯುತ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆಯ ಬಗ್ಗೆ ಸಂವಾದದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಗ್ರಾಹಕ ರಾಘವೇಂದ್ರ ಮಾತನಾಡಿ, ಸೇವಾ ಸಹಕಾರಿ ಸಂಘಗಳು ವರ್ಕ್ ಪ್ರಾಮ್ ಹೋಂ ಗೆ ಜಾಗ, ಇಂಟರ್ ನೆಟ್ ಹಾಗು ವಿದ್ಯುತ್ ವ್ಯವಸ್ಥೆ ಮಾಡಬೇಕು ಎಂದು ಅಹವಾಲು ವ್ಯಕ್ತಪಡಿಸಿದರು.
ಖಾಸಗಿ ಕಂಪನಿ ಉದ್ಯೋಗಿ ಪ್ರತೀಕ್ ಮಾತನಾಡಿ, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ವಿದ್ಯುತ್ ತೆಗೆಯುವಿಕೆ ಮುಂಚಿತವಾಗಿ ತಿಳಿಸಬೇಕು. ಇಂಟರ್ ನೆಟ್ ಸಮಸ್ಯೆ ನಮ್ಮಲ್ಲಿ ತೀವ್ರವಾಗಿದೆ. ವಿದ್ಯುತ್ ಸಮಸ್ಯೆ ತಪ್ಪಿಸಲು ಇನ್ವರ್ಟರ್ ಖರೀದಿಗೆ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಬಿಎಸ್ ಎನ್ ಎಲ್, ಹೆಸ್ಕಾಂ, ಏರ್ ಟೆಲ್, ಜಿಯೊ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡು ನೆಟ್ವರ್ಕ್ ವಿಸ್ತರಣೆಯ ಕುರಿತು ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ಶಿರಸಿ ಟೆಕ್ ಫಾರಮ್ ಪ್ರಮುಖರಾದ ಸೀತಾರಾಮ ಭಟ್ಟ ಕೆರೆಕೈ, ಸಿಎ ವಿನಾಯಕ ಹೆಗಡೆ, ಸಿಎ ಎಸ್ ಜಿ ಹೆಗಡೆ, ತಹಶೀಲ್ದಾರ ಎಮ್ ಅರ್ ಕುಲಕರ್ಣಿ, ಪತ್ರಕರ್ತೆ ಶೈಲಜಾ ಗೋರ್ನಮನೆ ಸೇರಿದಂತೆ ಇನ್ನಿತರರು ಇದ್ದರು