ಹೊನ್ನಾವರ: ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ರಸ್ತೆ ಕಾಮಗಾರಿ ಆರಂಭವಾದ ಹಿನ್ನಲೆ ಸೋಮವಾರ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದು ಈ ವೇಳೆ ಪ್ರತಿಭಟನಾ ನಿರತರನ್ನು ಬಂಧಿಸಲಾಯಿತು.
ಹೊನ್ನಾವರ ತಾಲೂಕಿನ ಕಾಸರಕೋಡ್ ಟೊಂಕಾದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆ ಕಾಮಗಾರಿ ಸತಾಯ ಗತಾಯವಾಗಿ ನಡೆಸಕೆಬೇಕೆಂಬ ನಿರ್ಧಾರಕ್ಕೆ ಬಂದಿದ್ದು, ಈ ಹಿನ್ನಲೆ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪನಿ ಸೂಕ್ತ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸೋಮವಾರ ಬಂದರು ಸಂಪರ್ಕಿಸುವ ಕಚ್ಚಾ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು.
ಇತ್ತ ಬೆಳ್ಳಂಬೆಳಿಗ್ಗೆ ರಸ್ತೆಯಲ್ಲಿ ಜೆಸಿಬಿ, ಹಿಟಾಚಿ ಯಂತ್ರಗಳು ಮಾರ್ಧನಿಸ ತೊಡಗಿದವು. ಟಿಪ್ಪರ್ ಗಳು ಮಣ್ಣು ಸರಬರಾಜು ಮಾಡುವಲ್ಲಿ ನಿರತರಾಗಿದ್ದವು. ಅತ್ತ,ನಮಗೆ ಈ ಖಾಸಗಿ ವಾಣಿಜ್ಯ ಬಂದರು ಯೋಜನೆ ಬೇಡವೆ ಬೇಡ, ನಮ್ಮ ನೆಲ ನಮ್ಮ ಹಕ್ಕು,ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ, ಪ್ರಾಣಕೊಟ್ಟೆವು ನಮ್ಮ ನೆಲ ಬಿಡೆವು ಎನ್ನುತ್ತಾ ಕೂಗಿ ಆಡಳಿತ ವರ್ಗದ ಮುಂದೆ ಮೊರೆಯಿಟ್ಟ ಮಂದಿ ನ್ಯಾಯ ಕೇಳಲು ಬಂದ ನಮ್ಮನ್ನೆಕೆ ಬಂದಿಸುತ್ತೀರಿ ಎಂದು ಪ್ರತಿಭಟನಾ ನಿರತರು ಬಂಧಿಸಲು ಬಂದ ಪೆÇಲೀಸರ ವಿರುದ್ದ ಗರಂ ಆದರು. ಐನೂರಕ್ಕು ಹೆಚ್ಚು ಮಂದಿ ಪೊಲೀಸ್ ವ್ಯವಸ್ಥೆ, ಪಿಎಸೈ ಇಂದ ಡಿವೈಎಸ್ ಪಿ,ಎಸ್.ಪಿ ಡಾ. ಸುಮನ್ ಡಿ ಫೆನ್ನೆಕರ್ ವರೆಗೂ ಹಾಗೂ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಸಹ ರಸ್ತೆ ಕಾಮಗಾರಿ ಆರಂಭ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಆಗಮಿಸಿದ್ದರು. ಕಾಸರಕೋಡದ ಗಲ್ಲಿ ಗಲ್ಲಿಯು ಖಾಕಿ ಪಡೆಯಿಂದ ಕೂಡಿತ್ತು.
ಮೀನುಗಾರರ ಪ್ರತಿಭಟನೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ಕಾಸರಕೋಡ್ ಗ್ರಾಮ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಪ್ರದೇಶದಲ್ಲಿ ಕಿಲೋಮೀಟರ್ ವರೆಗೂ ಕಬ್ಬಿಣದ ಗೇಟ್ ಅಳವಡಿಸಲಾಗಿತ್ತು. ಯಾರು ಪ್ರತಿಭಟಿಸದಂತೆ, ಗುಂಪು ಸೇರದಂತೆ ಖಾಕಿ ಪಡೆ ನಿಗಾ ವಹಿಸಿದ್ದರು.
ಪ್ರತಿಭಟನಾ ನಿರತ 18 ಜನ ಮೀನುಗಾರ ಮುಖಂಡರನ್ನು ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಗೆ ಕೊಂಡೊಯ್ಯಲಾಯಿತು. ಕಚ್ಚಾ ರಸ್ತೆಗೆ ಮಣ್ಣು ಸುರಿಯುತ್ತಿರುವುದರಿಂದ ರಸ್ತೆಯಂಚಿನ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಯಿತು. ಅನಾರೋಗ್ಯ ಪೀಡಿತರು ಧೂಳು ಸೇವಿಸಿ ಇನ್ನಷ್ಟು ಆರೋಗ್ಯ ಹದಗೆಡುತ್ತದೆ ಎಂದು ಕೆಲ ನಿವಾಸಿಗಳು ಅಳಲತೊಡಿಕೊಂಡರು. ಧೂಳು ಆಗದಂತೆ ಕನಿಷ್ಟಪಕ್ಷ ಪರ್ಯಾಯ ವ್ಯವಸ್ಥೆಯಾದರು ಮಾಡಿಕೊಳ್ಳದೆ ಮಣ್ಣು ಸಾಗಿಸುವ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.