ಕುಮಟಾ : ನಾನು ಶಾಸಕಳಾಗಿದ್ದ ಸಂದರ್ಭದಲ್ಲಿ ಚಿಪ್ಪಿ ಗಣಿಗಾರಿಕೆ ನಿಲ್ಲಿಸಿ ಮೀನುಗಾರರ ಪರವಾಗಿ ನಿಂತಿದ್ದೆ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ತಿಳಿಸಿದ್ದಾರೆ.
ಕೆಲ ದಿನಗಳಿಂದ ಮೀನುಗಾರರು ಚಿಪ್ಪಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಚಿಪ್ಪಿ ಗಣಿಗಾರಿಕೆ ವಿರುದ್ಧ ನಾನು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಕಳೆದಬಾರಿ ನಾನು ಶಾಸಕಳಾಗಿದ್ದ ಸಂದರ್ಭದಲ್ಲಿಯೇ ಇದನ್ನು ಮೀನುಗಾರರ ಆಶಯದಂತೆ ನಿಲ್ಲಿಸಿದ್ದೆ. ಆದರೆ ಕೇಂದ್ರ ಸರ್ಕಾರದ ಕಾಯಿದೆಯಂತೆಯೇ ಈಗಿನ ರಾಜ್ಯ ಸರಕಾರ ಚಿಪ್ಪುಗಣಿಗಾರಿಕೆಗೆ ಅನುಮತಿಯನ್ನು ನವೀಕರಿಸಲು ಹೊರಟಿರುವುದು ದುರದೃಷ್ಟಕರ.
ಕರ್ನಾಟಕದಲ್ಲಿ ಜೀವವೈವಿಧ್ಯತೆಗಳನ್ನೊಳಗೊಂಡ ಕೆಲವೇ ಕೆಲವು ನದಿಗಳಲ್ಲಿ ನಮ್ಮ ಅಘನಾಶಿನಿ ನದಿಯು ಒಂದಾಗಿದ್ದು, ಅಘನಾಶಿನಿಯಲ್ಲಿ ಸಿಗುತ್ತಿದ್ದ ಕಪ್ಪೆಚಿಪ್ಪು (ಬಳಚು) ನಿಂದಲೇ ಸಾವಿರಾರು ಜನರ ಜೀವನಾಧಾರ ಇತ್ತು. ಕೆಲವು ವರ್ಷಗಳಿಂದ ಕಪ್ಪೆ ಚಿಪ್ಪು ಸಿಗದೇ ಆ ಭಾಗದ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಹಲವು ವರ್ಷಗಳಿಂದ ಸ್ಥಗಿತವಾಗಿದ್ದ ಚಿಪ್ಪಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಹಲವಾರು ಮೀನಿನ ಸಂತತಿಗಳು ನಾಶವಾಗಿ, ಮೀನುಗಾರರ ಜೀವನ ಬೀದಿಗೆ ಬೀಳುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಚಿಪ್ಪಿಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸುತ್ತಿದ್ದೇನೆ ಎಂದರು.