• Slide
    Slide
    Slide
    previous arrow
    next arrow
  • ಸಮಾಧಿ ಕಿತ್ತೆಸೆದ ಲಾರಿ ಮಾಲೀಕರ ಸಂಘದ ಕ್ರಮಕ್ಕೆ ವಿವಿಧ ಸಮಾಜದವರ ಆಕ್ರೋಶ

    300x250 AD

    ಯಲ್ಲಾಪುರ: ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಸಮಾಧಿಗಳನ್ನು ಕಿತ್ತು ಹಾಕಿರುವ ಲಾರಿ ಮಾಲೀಕರ ಸಂಘದ ಕ್ರಮದ ವಿರುದ್ಧ ಸವಿತಾ ಸಮಾಜ ಹಾಗೂ ವಿವಿಧ ಸಮಾಜಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸವಿತಾ ಸಮಾಜ, ನಾಮಧಾರಿ, ಬೋವಿವಡ್ಡರ್, ವಾಲ್ಮೀಕಿ, ಭಜಂತ್ರಿ ಇತರ ಸಮಾಜದ ಪ್ರಮುಖರು ಮಾಧ್ಯಮದವರೆದುರು ತಮ್ಮ ಅಸಮಾಧಾನ ಹೊರಹಾಕಿದರು. ಸವಿತಾ ಸಮಾಜದವರು ಹಾಗೂ ಇತರ ಸಮಾಜದವರು ಆ ಜಾಗದಲ್ಲಿ ಕಳೆದ 85 ವರ್ಷಕ್ಕಿಂತ ಹಿಂದಿನಿಂದ ಶವ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಆದರೆ ಆ ಪ್ರದೇಶದಲ್ಲಿ 34 ಗುಂಟೆ ಜಾಗವನ್ನು ವಾಹನ ನಿಲುಗಡೆಗಾಗಿ 1940 ರಲ್ಲಿಯೇ ಬ್ರಿಟಿಷ್ ಸರ್ಕಾರ ಲಾರಿ ಮಾಲೀಕರ ಸಂಘಕ್ಕೆ ನೀಡಿದ ದಾಖಲೆಯೊಂದಿಗೆ ಅಲ್ಲಿನ ಸಮಾಧಿಗಳನ್ನೂ ನೆಲಸಮ ಮಾಡಲಾಗಿದೆ. ಅನೇಕ ಕುಟುಂಬದವರಿಗೆ ತಮ್ಮ ಪೂರ್ವಜರ ಸಮಾಧಿಗೆ ನಮಿಸುವುದಕ್ಕೂ ಅವಕಾಶ ಇಲ್ಲದಂತಾಗಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಸಂತೋಷ ನಾಯ್ಕ ದೂರಿದರು. ಸಚಿವರು ಈ ಕುರಿತು ಗಮನ ಹರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣ ಪಂಚಾಯಿತಿ ಸದಸ್ಯರೂ ಈ ಕುರಿತು ಸಹಕರಿಸಬೇಕು. ಇಲ್ಲವಾದರೆ ಯಲ್ಲಾಪುರ ಬಂದ್ ಮಾಡಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

    ಬೋವಿವಡ್ಡರ್ ಸಮಾಜದ ಪ್ರಮುಖ ಮಾರುತಿ ಬೋವಿವಡ್ಡರ್, ಕಾಮಗಾರಿಯ ಭರದಲ್ಲಿ ಹಲವು ಸಮಾಧಿಗಳನ್ನು ಕಿತ್ತೆಸೆಯಲಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗೆ ಇದರಿಂದ ಧಕ್ಕೆ ಉಂಟಾಗಿದೆ. ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು ಅವರದ್ದೇ ಆದ ರುದ್ರಭೂಮಿ ಹೊಂದಿದ್ದಾರೆ. ಆದರೆ ಬಹುಸಂಖ್ಯಾತ ಹಿಂದುಗಳಿಗೆ ಅಧಿಕೃತ ರುದ್ರಭೂಮಿ ಇಲ್ಲದಿರುವುದು ವಿಪರ್ಯಾಸ. ಹಾಗಾಗಿಯೇ ಇಂತಹ ಅನ್ಯಾಯ ಉಂಟಾಗುತ್ತಿದೆ. ಟ್ರಕ್ ಟರ್ಮಿನಲ್ ನಿರ್ಮಾಣದ ಬಗೆಗೆ ನಮ್ಮ ವಿರೋಧವಿಲ್ಲ, ಆದರೆ ಏಕಾಏಕಿ ಈ ರೀತಿ ಸಮಾಧಿಗಳನ್ನು ಕಿತ್ತಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    300x250 AD

    ಸವಿತಾ ಸಮಾಜದ ಅಧ್ಯಕ್ಷ ನಾಗರಾಜ ಯಾಮಕೆ ಮಾತನಾಡಿ, ಕಳೆದ ವಾರ ನಮ್ಮ ಸಮಾಜದವರೊಬ್ಬರು ಮೃತಪಟ್ಟಾಗ ಶವಸಂಸ್ಕಾರಕ್ಕೆಂದು ಈ ಪ್ರದೇಶಕ್ಕೆ ತಂದು, ಗುಂಡಿ ತೆಗೆದಿದ್ದೆವು. ಇನ್ನೇನು ಶವ ಸಂಸ್ಕಾರ ಮಾಡಬೇಕೆನ್ನುವಷ್ಟರಲ್ಲಿ ನಮ್ಮನ್ನು ತಡೆದು, ಅಲ್ಲಿ ಅವಕಾಶ ನೀಡದೇ ಬೇರೆಡೆ ಕಳುಹಿಸಿದರು. ನಂತರ ಪ.ಪಂ ಅಧಿಕಾರಿಗಳ ಸಹಕಾರದೊಂದಿಗೆ ಬೇರೆಡೆ ಅಂತ್ಯಕ್ರಿಯೆ ನೆರವೇರಿಸಿದೆವು. ಇಷ್ಟು ವರ್ಷ ಸುಮ್ಮನಿದ್ದು ಈಗ ಏಕಾಏಕಿ ಟ್ರಕ್ ಟರ್ಮಿನಲ್ ನಿರ್ಮಾಣ ಆರಂಭಿಸಿದ್ದೇಕೆ ಎಂದು ಪ್ರಶ್ನಿಸಿದರು.

    ವಿವಿಧ ಸಮಾಜಗಳ ಪ್ರಮುಖರಾದ ನಾಗೇಶ ಬೋವಿವಡ್ಡರ್, ಜಗನ್ನಾಥ ರೇವಣಕರ್, ರವಿ ಪಾಟಣಕರ್, ಮಹಾದೇವ ಬೋವಿವಡ್ಡರ್, ಸುರೇಶ ಕಟ್ಟದಮನಿ, ಸಂಜು ಜಾಧವ, ಅಶೋಕ ಕೊರವರ್, ಮಂಜುನಾಥ ಹೆಗಡೆ, ಬುಚ್ಚಣ್ಣ ಯಾಮಕೆ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top