ಮುಂಡಗೋಡ: ನಮ್ಮ ಸಂಘದಿಂದ ಶ್ರೀರಾಮಲು ಅವರು ಆರೋಗ್ಯ ಸಚಿವರಾಗಿದ್ದಾಗ ನಮ್ಮ ಸಮಸ್ಯೆಗಳ ಬಗ್ಗೆ ಮನವಿಯನ್ನು ಮಾಡಿಕೊಂಡಿದ್ದೆವು, ಅದರಂತೆ ನಮ್ಮ ಸಮಸ್ಯೆಗಳ ಸ್ಪಂದಿಸಿದ ಸರ್ಕಾರ ಬಾಕಿ ಇರುವ ಸಿಬ್ಬಂದಿಗಳ ವೇತನ ಜಮಾ ಮಾಡಿ ಕಷ್ಟದಲ್ಲಿದ್ದ ಸಿಬ್ಬಂದಿಗಳಿಗೆ ಹಣ ಬಿಡುಗಡೆ ಮಾಡಿಕೊಟ್ಟಿದೆ. ಆದರಿಂದ ಅಧಿಕಾರಿ ವೃಂದಕ್ಕೂ ಹಾಗೂ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕರ್ನಾಟಕ್ ರಾಜ್ಯ 108 ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಕ್ ಹಳ್ಳುರ ಹೇಳಿದರು.
ಅವರು ಪಟ್ಟಣದ ನಿವೃತ್ತ ನೌಕರರ ಭವನದ ಸಭಾ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ್ ರಾಜ್ಯ 108 ನೌಕರರ ಸಂಘದಿಂದ ರಾಜ್ಯಮಟ್ಟದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು.
2016 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ .ಆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳಬೇಕು ಅಲ್ಲದೆ ಹಳೆಯ ಸಿಬ್ಬಂದಿಗಳ ವೇತನದಲ್ಲಿ ತಾರತಮ್ಯ ನಡೆದಿದೆ ಅದನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ನೂತನ ಟೆಂಡರ್ ಕರೆಯಲಾಗುತ್ತದೆ. ಅದರಲ್ಲಿ ಈಗಿರುವ ಸಿಬ್ಬಂದಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಬೇರೆ ಸಿಬ್ಬಂದಿಗಳ ನಿಯೋಜನೆಗೆ ಮುಂದಾಗಬಾರದು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ 2020-21 ರ ಅರಿಯರ್ಸ್, ಇನ್ಕ್ರಿಮೆಂಟ್ ನೀಡಲು ಒತ್ತಾಯಿಸಿದ ಪಧಾಧಿಕಾರಿಗಳು, ಕೋವಿಡ್ 2ನೇ ಅಲೆಯಲ್ಲಿ ಕೆಲಸ ನಿರ್ವಹಿಸಿದ್ದವರಿಗೆ ನೀಡಬೇಕಾಗಿದ್ದ ಭತ್ತೆಯನ್ನು ಇದುವರೆಗೂ ನೀಡಿಲ್ಲ ಕೂಡಲೆ ಭತ್ತೆಯ ಹಣವನ್ನು ಬಿಡುಗಡೆಗೊಳಿಸಬೇಕು ಎಂದರು.
ರಾಜ್ಯಾಧ್ಯಂತ ಕಾರ್ಯನಿರ್ವಹಿಸುತ್ತಿರುವ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು, ಸ್ವಂತ ಜಿಲ್ಲೆ ಬಿಟ್ಟು ಬೇರೆ ಬೇರೆಯ, ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಿಂದ ಸಿಬ್ಬಂದಿಗಳಿಗೆ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ, ಸಿಬ್ಬಂದಿಗಳನ್ನು ಅವರವರ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಘಟಕದ ಪಧಾಧಿಕಾರಿಗಳಾದ ಮಲ್ಲಿಕಾರ್ಜುನ ಪಿ, ಅಶೋಕ್ ವಿ, ಸುನೀಲ್ ಕೆ, ಪಾಂಡಪ್ಪ ಕೊರತಿ, ಧನರಾಜ್ ಸಿ ಬಳೂರ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಸಿಬ್ಬಂದಿಗಳು ಉಪಸ್ಥಿತರಿದ್ದರು.