ಬೆಂಗಳೂರು: ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಹಾಗೂ ಯಕ್ಷಗಾನ ವಿಶ್ವಕೋಶ ಕುರಿತು ಬಜೆಟ್ ನಲ್ಲಿ ವಿಶೇಷ ಅನುದಾನ ಸೇರ್ಪಡೆ ಮಾಡಲು ಪ್ರಯತ್ನ ಮಾಡುವದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ವಿ. ಭರವಸೆ ನೀಡಿದರು.
ಅವರು ಶುಕ್ರವಾರ ವಿಧಾನ ಸೌಧದಲ್ಲಿ ಭೇಟಿ ಮಾಡಿದ ಯಕ್ಷಗಾನ ಅಕಾಡೆಮಿ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರಲ್ಲಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಯಕ್ಷಗಾನ ಅಕಾಡೆಮಿಯ ಕಾರ್ಯದ ಜೊತೆಗೆ ಸದಾ ಬೆಂಬಲವಾಗಿರುತ್ತದೆ ಎಂದರು. ಸಾಹಿತ್ಯ ಸಮ್ಮೇಳನದಂತೆ ಯಕ್ಷಗಾನದ ಸಮ್ಮೇಳನ ಕೂಡ ಆಗಬೇಕು. ಇದರಿಂದ ಯಕ್ಷಗಾನದ ಪ್ರಸಿದ್ದಿಗೆ, ವಿಸ್ತಾರಕ್ಕೆ ನೆರವಾಗುತ್ತದೆ. ಅಕಾಡಮಿಯ ಈ ಪ್ರಸ್ತಾವನೆ ಹಾಗೂ ಯಕ್ಷಗಾನ ವಿಶ್ವಕೋಶದ ನೆರವಿಗೂ ಬಜೆಟ್ ಅನುದಾನ ಒದಗಿಸಲು ಸಿಎಂ ಜೊತೆಗೂ ಮಾತನಾಡುವದಾಗಿ ಹೇಳಿದರು.
ಅಕಾಡೆಮಿಗೆ ನೂತನ ಅಧ್ಯಕ್ಷರು ನೇಮಕ ಆಗಿದ್ದು, ಅರ್ಹತೆಗೆ ಸಂದ ಗೌರವ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಬರಲಿದ್ದೇನೆ. ಕೋವಿಡ್ ಕಡಿಮೆ ಆದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸೋಣ ಎಂದೂ ಹೇಳಿದ ಅವರು, ಅಕಾಡೆಮಿ ಮೂಲಕ ಕಲೆಯ ವಿಸ್ತಾರ, ಎತ್ತರದ ಕಾರ್ಯ ಆಗಬೇಕು ಎಂದರು.
ಈ ವೇಳೆ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಜಂಟಿನಿರ್ದೇಶಕರುಗಳಾದ ಬಲವಂತರಾವ್ ಪಾಟೀಲ, ಅಶೋಕ ಚೆಲುವಾದಿ, ಬನಶಂಕರಿ ಅಂಗಡಿ, ಅಕಾಡೆಮಿ ರಿಜಿಸ್ಟ್ರಾರ್ ಎಚ್.ಎಸ್.ಶಿವರುದ್ರಪ್ಪ ಇತರರು ಇದ್ದರು.