ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 800ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ಕಾರವಾರ ನಗರದಲ್ಲಿ ಪಾಸಿಟಿವ್ ಪ್ರಕರಣ 153, ಕುಮಟಾದಲ್ಲಿ 92 ಪ್ರಕರಣ ದಾಖಲಾಗಿದೆ. ಜಿಲ್ಲೆಯ ವಿವಿಧ ಶಾಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದ್ದರಿಂದ ಗುರುವಾರ 9 ಶಾಲೆಗೆ ರಜೆ ಘೋಷಿಸಿ ಆದೇಶಮಾಡಲಾಗಿದೆ. ಯಲ್ಲಾಪುರದಲ್ಲಿ 1, ದಾಂಡೇಲಿ 4, ಶಿರಸಿ 1 ಕೊವಿಡ್ ಕ್ಲಸ್ಟರ್ ಆಗಿದ್ದರಿಂದ ರಜೆ ನೀಡಲಾಗಿದೆ. ಹೊನ್ನಾವರದಲ್ಲಿ 3, ಕುಮಟಾದಲ್ಲಿ 1 ಶಾಲೆಗೆ ರಜೆ ನೀಡಲಾಗಿದೆ ಎಂದರು.
ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಹೊನ್ನಾವರ, ಕುಮಟಾ ತಾಲೂಕಿನ 9 ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಜ. 19 ರಂದು ಕೊವಿಡ್ ಸೋಂಕು ಕಂಡು ಬಂದಿದ್ದು, ಜ. 25 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಯಲ್ಲಾಪುರದ ಮದರ ಥೆರಸಾ ಪ್ರೌಢ ಶಾಲೆಯಲ್ಲಿ 5, ದಾಂಡೇಲಿಯ ಎಸ್ ಎಚ್ ಸೂರಗಾವಿ ಇಂಟರ್ ನ್ಯಾಷನಲ್ ಸೂಲ್‌ನಲ್ಲಿ10, ಬಿ ಸಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 9 ಹಾಗೂ ಕಿರಿಯ ಪ್ರಾಥಮಿಕ ಶಾಲೆ ಆಡಿಟ್ ನಂ 2 ರಲ್ಲಿ 5, ಮತ್ತು ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ 10, ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ 20, ಹೊನ್ನಾವರದ ಹೋಲಿರೋಸರಿ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ 20, ಇಡಗುಂಜಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 19, ಹೊದ್ದೆಶಿರೂರನ ಸರ್ಕಾರಿ ಪ್ರೌಢ ಶಾಲೆಯಲ್ಲಿ 10, ಕುಮಟಾ ತಾಲೂಕಿನ ಸಂತೆಗುಳಿ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿನ 7 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ ಎಂದು
ಡಿಸಿ ತಿಳಿಸಿದರು.
ಜ. 25 ರ ವರೆಗೂ 1 ರಿಂದ 7 ತರಗತಿಯವರೆಗೆ ರಜೆ ನೀಡಲಾಗುತ್ತಿದ್ದು, 8, 9 ತರಗತಿ ಹಾಗೂ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಒಟ್ಟಾರೆ ಶೇ. 50ರಷ್ಟು ತರಗತಿಗಳನ್ನು ನಡೆಸಲು ಅನುಮತಿ ಇದೆ. ಕೊವಿಡ್ ಗುಣ ಲಕ್ಷಣಗಳಿರುವ ಮಕ್ಕಳನ್ನು ಪಾಲಕರು ಶಾಲಾ ಕಾಲೇಜುಗಳಿಗೆ ಕಳುಹಿಸಿ ಕೊಡಬೇಡಿ ಎಂದರು.
18 ವರ್ಷದ 15800 ಮಕ್ಕಳಿಗೆ ಲಸಿಕೆ ನೀಡುವುದರಲ್ಲಿ ಸರಕಾರದ ನಿಯಮಾವಳಿಯಂತೆ ಜಿಲ್ಲೆಯಲ್ಲಿ ಶೇಕಡಾ 82 ರಷ್ಟು ಲಸಿಕಾಕರಣವಾಗಿದೆ. ಜಿಲ್ಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೋಡಿದಲ್ಲಿ ಶೇ. 90 ರಷ್ಟು ಲಸಿಕೆ ನೀಡಲಾಗಿದೆ. ಕೇವಲ ಭಟ್ಕಳದಲ್ಲಿ ಲಸಿಕೆ ಪ್ರಮಾಣ ಕಡಿಮೆಯಿದ್ದು, ಅಲ್ಲಿ ಕೂಡ ಮನವೊಲಿಸಿ ಲಸಿಕೆ ಹಾಕುವ ಮೂಲಕ 15ರಿಂದ 18 ವರ್ಷದ ಮಕ್ಕಳ ಲಸಿಕೆ ನೀಡುವಿಕೆಯಲ್ಲಿ ಶೇ. 100ರಷ್ಟು ಗುರಿ ಸಾಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್ ಕೆ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ, ಡಾ. ರಮೇಶ ರಾವ್ ಇದ್ದರು.