• Slide
  Slide
  Slide
  previous arrow
  next arrow
 • ರೈತರ ಸಮಗ್ರ ಅಭಿವೃದ್ಧಿಗೆ ಜೇನು ಕೃಷಿ ಸಹಕಾರಿ;ಅಧ್ಯಕ್ಷ ಶಂಖರ ವಿ ಮುಗದ

  300x250 AD

  ಶಿರಸಿ: ರಾಷ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ ಉತ್ತರ ಕನ್ನಡ ಶಿರಸಿ ಮತ್ತು ಧಾರವಾಡ,ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶಿರಸಿ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೇ ತಿಂಗಳ ಜನವರಿ 19 ರಿಂದ 25 ನೇ ತಾರೀಖಿನ ವರೆಗೆ ನಡೆಯುವ 7 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕರ ವಿ ಮುಗದ ದೀಪ ಬೆಳಗುವ ಮೂಲಕ ಶಿರಸಿಯ ಹುಳಗೋಳ ಸೇವಾ ಸಹಕಾರಿ ಸಂಘ ನಿ., ಭೈರುಂಬೆಯಲ್ಲಿ ಇಂದು ಚಾಲನೆ ನೀಡಿದರು.

  7 ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕರ ವಿ ಮುಗದ ಅವರು ಜೇನು ಕೃಷಿಯ ವಿಷಯದ ಬಗ್ಗೆ ಈ ಮೂದಲು ನಮ್ಮ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ಮಾಡಲ್ಪಟ್ಟಾಗ ಜೇನು ಕೃಷಿಯನ್ನು ನಡೆಸಿಕೊಂಡು ಹೋಗಲು ನಮ್ಮಿಂದ ಸಾಧ್ಯವಾಗದು ಮತ್ತು ಈ ಯೋಜನೆಯನ್ನು ಕೈಬಿಡುವ ವಿಚಾರ ನಮ್ಮ ಮುಂದೆ ಇತ್ತು ಆದರೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯವರ ಸತತ ಒತ್ತಾಯದ ಮೇರೆಗೆ ಅವರು ನಮ್ಮಲ್ಲಿ ಮನವಿ ಮಾಡಿ ಒಂದು ಜಿಲ್ಲೆಯನ್ನಾದರೂ ಜೇನು ಕೃಷಿಗೆ ಗುರುತಿಸಿಕೊಡುವಂತೆ ಕೇಳಿಕೊಂಡಾಗ ಉತ್ತರ ಕನ್ನಡ ಜಿಲ್ಲೆಯನ್ನು ಜೇನು ಕೃಷಿ ತರಬೇತಿಗೆ ಸೂಕ್ತ ಎಂದು ನಾವುಗಳು ಪರಿಗಣಿಸಿ ತರಬೇತಿ ಕಾರ್ಯಕ್ರಮಕ್ಕೆ ಈ ಜಿಲ್ಲೆಯನ್ನು ತೆಗೆದುಕೊಳ್ಳಲಾಯಿತು ಎಂದರು.

  ಮುಂದಿನ ದಿನಗಳಲ್ಲಿ ರೈತರ ಸಮಗ್ರ ಅಭಿವ್ರದ್ಧಿಗೆ ಹೈನುಗಾರಿಕೆಯ ಜೊತೆಗೆ ಜೇನು ಕೃಷಿಯು ಅತ್ಯಂತ ಸಹಾಯಕರವಾಗಲಿದೆ .ಒಂದು ಆಕಳನ್ನು ಪಾಲನೆ ಮಾಡಿ ಅದರಿಂದ ಉತ್ತಮ ರೀತಿಯ ಹಾಲನ್ನು ಉತ್ಪಾದನೆ ಮಾಡುವುದು ಎಷ್ಟು ಕಷ್ಟಕರವಾಗಿದೇಯೋ ಅದೇ ರೀತಿ ಒಂದು ಜೇನು ಪೆಟ್ಟಿಗೆಯನ್ನು ಮನೆಗೆ ತಂದು ಅದರಲ್ಲಿ ಜೇನುಹುಳುಗಳನ್ನು ಸಾಕಾಣೆ ಮಾಡಿ ಜೇನು ತುಪ್ಪವನ್ನು ಉತ್ಪಾದಿಸುವುದು ಸಹ ಅತ್ಯಂತ ಸವಾಲಿನ ಕೆಲಸವಾಗಲಿದೆ ಎಂದರು. ಆದರೆ ರೈತರ ಆರ್ಥಿಕ ಹಿತ ದೃಷ್ಠಿಯಿಂದ ಜೇನು ಕೃಷಿಯನ್ನು ಒಂದು ಸವಾಲಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ರೈತರು ಈ ಜೇನು ಕೃಷಿಯಿಂದ ಉತ್ತಮ ಆದಾಯ ಹೊಂದುವಂತಾಗಬೇಕು ಎಂದು ಆಶಿಸಿದರು.ಈ ಸಂದರ್ಭದಲ್ಲಿ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಜಿಲ್ಲೆಯ ನಿರ್ದೇಶಕರುಗಳಾದ ಶಂಕರ ಪಿ ಹೆಗಡೆ ಹಾಗೂ ಪರಶುರಾಮ ವಿ ನಾಯ್ಕ ಇವರುಗಳೊಂದಿಗೆ ವಿತರಿಸಿದರು.

  ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ( ಶೇ – ತಾಂ ) ಡಾ. ವೀರೇಶ ತರಲಿ ಅವರು ಉತ್ತರ ಕನ್ನಡ ಜಿಲ್ಲೆಯು ಜೇನು ಕೃಷಿಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು, ಇಲ್ಲಿನ ಪ್ರತೀಯೊಬ್ಬ ರೈತನೂ ಸಹ ಹೈನುಗಾರಿಕೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು ಈಗ ಹೈನುಗಾರಿಕೆಯ ಜೊತೆಯಲ್ಲಿಯೇ ಜೇನು ಕೃಷಿಯನ್ನು ಸಹ ನಡೆಸಿಕೊಂಡು ಹೋಗುವ ಸದಾವಕಾಶ ಇಲ್ಲಿನ ಭಾಗದ ರೈತರಿಗೆ ದೊರಕಿದ್ದು, ಜೇನು ಕೃಷಿಯನ್ನು ಒಂದು ಉಪ ಕಸುಬನ್ನಾಗಿ ಉಪಯೋಗಿಸಿಕೊಂಡು ಇಲ್ಲಿನ ಭಾಗದ ರೈತರು ಆರ್ಥಿಕವಾಗಿ ಇನ್ನೂ ಸದೃಢ ಹೊಂದುವಂತಾಗಬೇಕು ಎಂದರು.

  ಜೇನು ಕೃಷಿಯ ಮಹತ್ವ ಮತ್ತು ಅದರ ಉಪಯೋಗಗಳ ಕುರಿತು ವಿವರಿಸದ ಹಿರಿಯ ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜು ಎಂ ಜೆ ಅವರು ನಮ್ಮ ಜಿಲ್ಲೆ ವಿವಿಧ ಜೀವ ವೈವೀಧ್ಯತೆಯಿಂದ ಕೂಡಿದ ಪ್ರದೇಶವಾಗಿದ್ದು, ಅದರಲ್ಲೂ ಜೇನು ಕೃಷಿಗೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದರು. ಸಕಲ ಸಸ್ಯ ಮತ್ತು ಜೀವ ಸಂಕುಲಗಳನ್ನು ಒಳಗೊಂಡಂತಹ ನಮ್ಮ ಈ ಜಿಲ್ಲೆ ಜೇನು ಕೃಷಿ ಮಾಡಲು ಸ್ವರ್ಗದಂತಹ ವಾತಾವರಣ ಹೊಂದಿದೆ ಎಂದರು. ಇಂತಹ ಅನುಕೂಲತೆಗಳನ್ನು ಬಳಸಿಕೊಂಡು ರೈತರು ಜೇನು ಕೃಷಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ಈ ಮೂಲಕ ಅವರು ಕರೆ ನೀಡಿದರು.

  300x250 AD

  ಧಾರವಾಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಮ ವಿ ನಾಯ್ಕ ಅವರು ಮಾತನಾಡಿ ಒಂದು ಜೇನುಗೂಡು ಹೇಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ತನ್ನ ಗೂಡನ್ನು ಬಲಿಷ್ಠಗೊಳಿಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ನಾವು ಒಕ್ಕೂಟವನ್ನು ಒಗ್ಗಟ್ಟಿನಿಂದ ಶಿಸ್ತಿನಿಂದ ಮುನ್ನಡೆಸಿಕೊಂಡು ರೈತರಿಗೆ ಅನುಕೂಲವಾಗುವ ದಿಶೆಯಲ್ಲಿ ಮುಂದೆ ಸಾಗಬೇಕು ಎಂದರು.

  ನಂತರ ಮಾತನಾಡಿದ ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ ಎಂ ಲೋಹಿತೇಶ್ವರ ಅವರು ಜೇನು ಕೃಷಿ ತರಬೇತಿಯು ಕಾರ್ಯರೂಪಕ್ಕೆ ಬಂದಿರುವುದು ಹಾಲು ಜೇನು ಒಟ್ಟಾದ ಹಾಗೇಯೇ ಆಗಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯವರು ತಮ್ಮ ಈ ಜೀವ ವೈವೀಧ್ಯತೆಯನ್ನು ಬಳಸಿಕೊಂಡು ಹಾಲಿನ ಉತ್ಪಾದನೆಯ ಜೊತೆಗೆ ಇನ್ನೂ ಉತ್ತಮ ಗುಣಮಟ್ಟದ ಜೇನನ್ನೂ ಸಹ ಉತ್ಪಾದನೆ ಮಾಡಿ ಅದರಿಂದ ಲಾಭವನ್ನು ಗಳಿಸಿ ತಮ್ಮ ಆರ್ಥಿಕ ಸ್ಥಿತಿಯನ್ನು ಇನ್ನೂ ಉತ್ತಮ ಗೊಳಿಸಿಕೊಳ್ಳುವಂತಾಗಲಿ ಎಂದರು.

  ಈ ಸಂದರ್ಭದಲ್ಲಿ ಧಾರವಾಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಶಂಕರ ಪಿ ಹೆಗಡೆ, ಹುಳಗೋಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿ ಎಸ್‌ ಹೆಗಡೆ ಕೆಶಿನ್ಮನೆ, ಧಾರವಾಡ ಸಹಕಾರಿ ಒಕ್ಕೂಟದ ಶಿರಸಿ ಉಪ ವಿಭಾಗದ ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್.ಬಿಜೂರ್‌, ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ, ದಯಾನಂದ ಎನ್‌, ಪಶು ವೈದ್ಯಾಧಿಕಾರಿಗಳಾದ ರಾಕೇಶ ತಲ್ಲೂರ್, ಶಿರಸಿ ಉಪ ವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಎಂ ಬೋರ್ಕರ್‌, ಅಭಿಷೇಕ ನಾಯ್ಕ, ಜಯಂತ ಪಟಗಾರ ಹಾಗೂ ಜೇನು ಕೃಷಿ ತರಬೇತಿ ಕಾರ್ಯಕ್ರಮದ ಪಾಲ್ಗೊಂಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರುಗಳು ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top