ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಯಾವುದೇ ಯೋಜನೆ ಸದ್ಯ ನಮ್ಮ ಮುಂದಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಹೆಚ್ಚು ಮನಸ್ಸು ಮಾಡಿದರೆ ಪ್ರತ್ಯೇಕ ಒಕ್ಕೂಟ ಆಗುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ಅವರು ನಗರದ ಕದಂಬ ಮಾರ್ಕೆಟಿಂಗ್ ಆವರಣದಲ್ಲಿ ನಂದಿನಿ ಉತ್ಪನ್ನಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಶಿರಸಿ ತಾಲೂಕಿನ ಹನುಮಂತಿ ಸಮೀಪದಲ್ಲಿ ಹಾಲು ಪ್ಯಾಕಿಂಗ್ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಫೆಬ್ರುವರಿ ಅಂತ್ಯದೊಳಗಾಗಿ ಉದ್ಘಾಟನೆ ನಡೆಯಲಿದೆ ಎಂದರು.
ಧಾರವಾಡ ಸಹಕಾರಿ ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟಾರೆಯಾಗಿ 1008 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 2.62 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಣೆ ಮಾಡುತ್ತಿದ್ದು, 1.07 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಪ್ಯಾಕೆಟ್ ಮೂಲಕ ದವ ರೂಪದಲ್ಲಿ ಮಾರಾಟ ಮಾಡುತ್ತಿದೆ. 15 ಸಾವಿರ ಲೀ, ಮೊಸರು ಮಾರಾಟ ಹಾಗೂ 10 ಸಾವಿರ ಲೀ. ನಷ್ಟು ಹಾಲಿನ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದ್ದು, ಉಳಿದ 1.30 ಲಕ್ಷ ಲೀ ನಷ್ಟು ಹಾಲನ್ನು ಕೆನೆಭರಿತ ಹಾಲಿನ ಪುಡಿಯನ್ನಾಗಿ ಪರಿವರ್ತನೆ ಮಾಡಿ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕರ್ನಾಟಕ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರಿಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಮೊದಲು ನೀಡುತ್ತಿದ್ದ 3.5 ಕೊಬ್ಬು ಹಾಗೂ 8.5 ಜಿಡ್ಡಿನಾಂಶ ಹೊಂದಿದ ಪ್ರತೀ ಲೀ ಆಕಳ ಹಾಲಿಗೆ 24.50 ಇರುವುದನ್ನು ಜನವರಿ 1, 2022 ರಿಂದ ಪ್ರತೀ ಲೀ ಆಕಳ ಹಾಲಿಗೆ ರೂ.0.50 ಪೈಸೆ, ಹೆಚ್ಚಿಸಿ ರೂ. 25/- ಪ್ರತೀ ಲೀ ಗೆ ಮಾಡಲಾಗಿರುತ್ತದೆ. ಅದೇ ರೀತಿ ಎಮ್ಮೆ ಹಾಲಿಗೆ ಈ ಮೊದಲು ನೀಡುತ್ತಿದ್ದ 6.0 ಕೊಬ್ಬು ಹಾಗೂ 9.0 ಜಿಡ್ಡಿನಾಂಶ ಹೊಂದಿದ ಪ್ರತೀ ಲೀ ಎಮ್ಮೆ ಹಾಲಿಗೆ ರೂ.33.25 ಪೈಸೆಯನ್ನು ನೀಡುತ್ತಿದ್ದು, ಎಮ್ಮೆ ಹಾಲಿಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲು ಗೆ ರೂ.4.75 ಪೈಸೆ ಹೆಚ್ಚಳ ಮಾಡಿ ಪ್ರತೀ ಲೀ ಎಮ್ಮೆ ಹಾಲಿಗೆ ರೂ. 38/- ಮಾಡಲಾಗಿರುತ್ತದೆ. ಮತ್ತು ಪಶು ಆಹಾರದ ಬೆಲೆಯಲ್ಲಿ ಪ್ರತೀ ಚೀಲ ನಂದಿನಿ ಗೋಲ್ಡ್ ಮತ್ತು ನಂದಿನಿ ಬೈಪಾಸ್ ಪಶು ಆಹಾರದ ಮೇಲೆ ತಲಾ ರೂ.26/-ನಷ್ಟು ಕಡಿಮೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 249 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 45 ರಿಂದ 47 ಸಾವಿರ ಕೆ.ಜಿ.ಯಷ್ಟು ಹಾಲು ಶೇಖರಣೆಯಾಗುತ್ತಿದ್ದು, 45 ಸಾವಿರ ಲೀ ಹಾಲನ್ನು ಪ್ಯಾಕೆಟ್ ಮೂಲಕ ಮಾರಾಟ ಮಾಡಲಾಗುತ್ತಿದ್ದು, ನಂದಿನಿ ಮೊಸರು ಹಾಗೂ ನಂದಿನಿ ಉತ್ಪನ್ನಗಳ ರೂಪದಲ್ಲಿ 7ಲೀ ಗಳನ್ನು ಮಾರಾಟ ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹನುಮಂತಿಯಲ್ಲಿ ಪಿ.ಪಿ.ಪಿ. ಯೋಜನೆಯ ಅಡಿಯಲ್ಲಿ 50 ಸಾವಿರ ಲೀ ಸಾಮರ್ಥ್ಯದ (2 ಲಕ್ಷ ಲೀ ಸಾಮರ್ಥ್ಯದ ವರೆಗೆ ವಿಸ್ತರಸಿಬಹುದಾದ) ಹಾಲಿನ ಸಂಸ್ಕರಣಾ ಮತ್ತು ಪ್ಯಾಕಿಂಗ್ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಟ್ಟಡದ ನಿರ್ಮಾಣ ಕಾಮಗಾರಿ ಹಾಗೂ ಯಂತ್ರೋಪಕರಣಗಳ ಜೋಡಣೆ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 249ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, ಏಪ್ರೀಲ್ ಮಾಹೆಯ ಒಳಗಾಗಿ 30 ರಿಂದ 35 ಸಂಘಗಳನ್ನು ಸ್ಥಾಪನೆ ಮಾಡಿ ದಿನಕ್ಕೆ 60 ಸಾವಿರ ಲೀ ನಷ್ಟು ಹಾಲನ್ನು ಶೇಖರಣೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಈಗಾಗಲೇ ನಾವು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಅದರ ಮೂಲಕ ಹಾಲನ್ನು ಸಂಗ್ರಹಣೆ ಮಾಡಿ ಹೈನುಗಾರಿಕೆಯನ್ನು ರೈತರಿಗೆ ಲಾಭದಾಯಕ ಉದ್ಯೋಗವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದೇ ರೀತಿಯಲ್ಲಿ ಜೇನು ಕೃಷಿಯಲ್ಲಿ ನಿರಂತರ ಆದಾಯವಿರುವ ಕಾರಣ ರೈತರ ಆದಾಯ ಹೆಚ್ಚಿಸಿ ಅವರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ,ಕರ್ನಾಟಕ ಹಾಲು ಮಹಾ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ ಶಿರಸಿ ಹಾಗೂ ಧಾರವಾಡ ಸಹಕಾರಿ ಹಾಲು ಒಕ್ಕೂಟದ ಸಹೋಗದೊಂದಿಗೆ 7 ದಿನಗಳ ಜೇನು ಕೃಷಿಯ ಕುರಿತು ತರಬೇತಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ದೊಡ್ನಳ್ಳಿ, ಒಕ್ಕೂಟದ ಮ್ಯಾನೆಜಿಂಗ್ ಡೈರೆಕ್ಟರ್ ಕೆ.ಎಂ. ಲೋಹಿತೇಶ್ವರ, ಒಕ್ಕೂಟದ ನಿರ್ದೇಶಕರಾದ ಶಂಕರ ಹೆಗಡೆ, ಪಿ.ವಿ. ನಾಯ್ಕ, ಕದಂಬ ಮಾರ್ಕೆಟಿಂಗ್ ಸೊಸೈಟಿ ಮುಖ್ಯಕಾರ್ಯನಿರ್ವಾಹಕ ವಿಶ್ವೇಶ್ವರ ಭಟ್ಟ ಕೋಟೆಮನೆ ಇದ್ದರು.