ಹೊನ್ನಾವರ: ಯಕ್ಷಗಾನ ಕಲೆ ಶ್ರೇಷ್ಠ ಹಾಗೂ ಸಂಪತ್ಭರಿತ. ಆದರೆ ಕಲಾವಿದರಲ್ಲ. ಆದರೂ ಆ ಕಲಾವಿದರೂ ಈ ತನಕ ತ್ಯಾಗ ದಿಂದ ಅದರ ಪಾವಿತ್ರ್ಯತೆ ಹಾಗೂ ಮೌಲಿಕತೆ ಯನ್ನು ಉಳಿಸಿದ್ದಾರೆ. ಇನ್ನೂ ಅದು ತನ್ನ ಶ್ರೇಷ್ಠತೆ ಉಳಿಸಿಕೊಂಡು ಬರಬೇಕು ಅಂತಾದರೆ, ಅದನ್ನು ಆಧುನಿಕತೆಯ ಋಣಾತ್ಮಕ ಪ್ರಭಾವ ಆಗದಂತೆ ಎಲ್ಲರೂ ರಕ್ಷಿಸಬೇಕು ಎಂದು ದೈವಜ್ಞ ಮಠಾಧೀಶ ಕರ್ಕಿಯ ಜ್ಞಾನೇಶ್ವರೀ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅವರು ಮಂಗಳವಾರ ಕರ್ಕಿಯಲ್ಲಿ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ, ಕುಮಟಾ ರನ್ನು ಆಶೀರ್ವದಿಸಿ, ಮಾತನಾಡಿದರು. ಕಲಾವಿದರು, ಕಲಾಪೋಷಕರು ಹಾಗೂ ಮೇಳಗಳು ಯಕ್ಷಗಾನ ವನ್ನು ಉದ್ಯೋಗ ಅಥವಾ ಉದ್ಯಮ, ವ್ಯವಹಾರದ ರೀತಿ ನೋಡದೇ, ಗೌರವದಿಂದ ಹಾಗೂ ತಲೆಮಾರುಗಳ ನಡುವಿನ ಸಾಂಸ್ಕೃತಿಕ ಸೇತುವಾಗಿ ನೋಡಬೇಕು. ಅದಕ್ಕೆ ಅಕಾಡೆಮಿ ಪೂರಕವಾಗಿ ಕಾರ್ಯ ಯೋಜಿಸಿ, ಸ್ಪಂದಿಸಿ ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ಡಾ. ಹೆಗಡೆ, ಎಲ್ಲಾ ಜನಪ್ರತಿನಿಧಿಗಳ, ಹಿರಿಯರ, ಅಕಾಡೆಮಿಯ ಸದಸ್ಯರ ಹಾಗೂ ಯಕ್ಷಗಾನ ಆಸಕ್ತರ ಅಭಿಪ್ರಾಯ ಸಂಗ್ರಹಿಸಿ, ದೀರ್ಘಕಾಲಿಕ ಮೌಲ್ಯದ ಕಾರ್ಯ ಯೋಜನೆ ಮಾಡಲು ಒಟ್ಟಾಗಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ, ಶ್ರೀ ಮಠದ ಪ್ರಮುಖರಾದ ಗುರುದಾಸ ಭಟ್ಟ, ಉದ್ಯಮಿ ಮಂಜುನಾಥ ಶೇಟ್, ಮಾಯಾ ಜಿ.ಹೆಗಡೆ ಹಾಗೂ ಇತರ ಗಣ್ಯರು ಹಾಜರಿದ್ದರು.