ಶಿರಸಿ : ತಾಲೂಕಿನ ಬದನಗೋಡ ಗ್ರಾ.ಪಂ ವ್ಯಾಪ್ತಿಯ ಸಂತೊಳ್ಳಿ ಹಿಂದೂ ರುದ್ರಭೂಮಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಸಂತೊಳ್ಳಿ ಗ್ರಾಮಸ್ಥರು ಶಿರಸಿ ಉಪವಿಭಾಗಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂತೊಳ್ಳಿ ಗ್ರಾಮದ ಸರ್ವೆ ನಂ.20ರಲ್ಲಿ 7 ಎಕರೆ 15 ಗುಂಟೆ ಸರ್ಕಾರಿ ಹಿಂದೂ ರುದ್ರಭೂಮಿಯಿದೆ. ಇದಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಕೊಡುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗೆದೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಗ್ರಾಮದಲ್ಲಿ ಸಾರ್ವಜನಿಕರಿಗೆ ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಆಗುತ್ತಿದೆ. ಯಾರಾದರೂ ನಿಧನರಾದರೆ ಅರಣ್ಯದಲ್ಲಿ ಅಂತ್ಯಸಂಸ್ಕಾರ ಮಾಡುವುದರಿಂದ ಹಸಿ ಮರಗಳು ಬೆಂಕಿಗೆ ಆಹುತಿ ಆಗುತ್ತಿವೆ. ಈ ಕಾರಣ ರುದ್ರಭೂಮಿಗೆ ಶವ ಹಾಗೂ ಕಟ್ಟಿಗೆಯನ್ನು ಸಾಗಿಸಲು ರಸ್ತೆ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ರಸ್ತೆ ಆಗದಿದ್ದರೆ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗಲಿದೆ. ಈ ಜೊತೆಗೆ ಅರಣ್ಯದಲ್ಲಿ ನಡೆಯುವ ಅಂತ್ಯ ಸಂಸ್ಕಾರದಿಂದ ಹಸಿ ಮರಗಳು ಬೆಂಕಿಗೆ ಅಹುತಿ ಆಗುತ್ತವೆ. ಇದೇ ರೀತಿ ಮುಂದುವರೆದರೆ ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರೈತ ಮುಖಂಡ ಯುವರಾಜ ಗೌಡ ನೇತೃತ್ವದಲ್ಲಿ ಮನವಿ ನೀಡಿದ ಗ್ರಾಮಸ್ಥರ ನಿಯೋಗದಲ್ಲಿ ಸ್ಥಳೀಯರಾದ ಗಣೇಶ ಮಾದರ, ಉದಯ ಗೌಡ, ಬಂಗಾರಣ್ಣ ಲೆಕ್ಕದ, ಶಂಭು ಪೂಜಾರ, ಬಸಪ್ಪ ಲೆಕ್ಕದ, ಮಂಜುನಾಥ, ದಯಾನಂದ ಆಚಾರಿ, ಆನಂದ ಬಿಜಾಪುರ, ಪರಸಪ್ಪ ಜಾಡರ, ನಾಗಪ್ಪ ಮಾದರ, ಶ್ರೀಧರ ಇತರರಿದ್ದರು.