ಬನವಾಸಿ: ರೋಟರಿ ಸಂಸ್ಥೆಯು ಶಿರಸಿ ತಾಲೂಕಿನ ಅನೇಕ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹ್ಯಾಪಿ ಸ್ಕೂಲ್ ಯೋಜನೆಯ ಅಡಿಯಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಸೋಮವಾರ ಬನವಾಸಿ ಸರ್ಕಾರಿ ಹೈಯರ್ ಪ್ರೈಮರಿ ಉರ್ದು ಶಾಲೆಗೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ನೀಡಿದ 16 ಲಕ್ಷ ರೂ. ಬೆಲೆಯ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದರು.
ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂಬ ಧೋರಣೆ ಬೇಡ ರೋಟರಿ ಸಂಸ್ಥೆಯಂತಹ ಅನೇಕ ಸಂಘ-ಸಂಸ್ಥೆಗಳು ಸರ್ಕಾರಕ್ಕೆ ನೆರವಿನ ಕಾರ್ಯ ಮಾಡಿದರೆ ನಾಡು ಸುಂದರವಾಗಿರುತ್ತದೆ ಎಂದರು.
ಶಿರಸಿ ರೋಟರಿ ಸಂಸ್ಥೆಯಿಂದ 5 ಕಂಪ್ಯೂಟರ್ ,5 ಪ್ರಾಜೆಕ್ಟರ್,50 ಡೇಸ್ಕ್,ಒಂದು ವಾಷ್ ಬೇಸಿನ್,2 ಪ್ಲೇಟ್ ಸ್ಟ್ಯಾಂಡ್, ಸೋಲಾರ್ ಸಿಸ್ಟಮ್,ಸೈನ್ಸ್ ಕಿಟ್, ಸ್ಫೋರ್ಟ್ಸ್ ಕಿಟ್, ಕಂಪೌಂಡ್ ವಾಲ್, ಪೇಟಿಂಗ್, ಎಲೆಕ್ಟ್ರಿಸಿಟಿ, ಗ್ರಂಥಾಲಯಕ್ಕೆ ಪುಸ್ತಕ ,5 ಟೇಬಲ್ ಸೇರಿ ಇನ್ನಿತರ 16 ವಸ್ತುಗಳನ್ನು ನೀಡಿದರು.
ಶಿರಸಿ ರೋಟರಿ ಅಧ್ಯಕ್ಷ ಪಾಂಡುರಂಗ ಪೈ ಮಾತನಾಡಿ ಶಿರಸಿ ತಾಲ್ಲೂಕಿನಲ್ಲಿ ಒಟ್ಟು 5 ಶಾಲೆಗಳಿಗೆ ಒಟ್ಟಾರೆ 84 ಲಕ್ಷ ರೂಪಾಯಿ ವೆಚ್ಚದ ಸಾಮಗ್ರಿ ನೀಡಲಾಗಿದೆ ಎಂದರು.
ರೋಟರಿಯನ್ ಡಾಕ್ಟರ್ ದಿನೇಶ್ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಬಸವರಾಜ್, ಬನವಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ ಆರೇರ್, ಉಪಾಧ್ಯಕ್ಷ ತಬ್ರೆಜ್ ಬೇಗ, ಎಸ್ ಡಿ ಎಮ್ ಸಿ ಅಧ್ಯಕ್ಷ ಇಕ್ಬಾಲ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಸ್. ಹೆಗಡೆ, ತಾಪಂ ಇಓ ದೇವರಾಜ್ ಹಿತ್ತಲಕೊಪ್ಪ, ಶಾಲೆಯ ಮುಖ್ಯಾಧ್ಯಾಪಕ ಅಬ್ದುಲ್ ಫಜಲ್, ರೋಟರಿ ಕಾರ್ಯದರ್ಶಿ ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.