ಶಿರಸಿ: ಕೊರೋನಾ, ಓಮಿಕ್ರಾನ್ ಸಂಕಷ್ಟದಲ್ಲಿ ಯಕ್ಷಗಾನ ಕಲಾವಿದರಿಗೆ ಸರಕಾರ ಸ್ಪಂದಿಸುವಂತಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಸೋಂದಾ ಸ್ವರ್ಣವಲ್ಲೀಯಲ್ಲಿ ಸೋಮವಾರ ಶ್ರೀಗಳು ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ ಅವರನ್ನು ಅಭಿನಂದಿಸಿ ಮಾತನಾಡಿದರು. ಕಲಾವಿದರು, ರಂಗಭೂಮಿ, ಯಕ್ಷಗಾನ ಸಂಕಷ್ಟದಲ್ಲಿವೆ. ಪ್ರದರ್ಶನ ಕೂಡ ನಡೆಸಲಾಗುತ್ತಿಲ್ಲ. ಈ ಬಗ್ಗೆ ಅಕಾಡಮಿ ಸ್ಪಂದಿಸುವಂಥಾಗಬೇಕು. ಈ ಅವಧಿಯಲ್ಲಿ ಒಳ್ಳೆಯ ಕೆಲಸಗಳು ಆಗಲಿ ಎಂದ ಅವರು, ದಿ.ಎಂ.ಎ.ಹೆಗಡೆ ಅವರ ಕಾಲದಲ್ಲಿ ನಿಂತ ಕಾರ್ಯಗಳೂ ಮುನ್ನಡೆಯಲಿ ಎಂದರು.
ಸಮ್ಮಾನ ಸ್ವೀಕರಿಸಿದ ಡಾ. ಜಿ.ಎಲ್.ಹೆಗಡೆ, ಎಲ್ಲರೂ ಸೇರಿ ಯಕ್ಷಗಾನ ಕ್ಷೇತ್ರ ವಿಸ್ತಾರ ಹಾಗೂ ಬಲಗೊಳಿಸಬೇಕಾಗಿದೆ. ಎಲ್ಲ ಶ್ರೀಮಠಗಳ ಬೆಂಬಲ, ಆಶೀರ್ವಾದ ಯಕ್ಷಗಾನದ ಮೇಲೆ ಇರಲಿ ಎಂದು ವಿನಂತಿಸಿದರು.
ಈ ವೇಳೆ ಯಕ್ಷ ಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ್ ಜೋಶಿ, ಶ್ರೀನಿಕೇತನ ಶಾಲೆಯ ನಿರ್ದೇಶಕ ದೀಪಕ ದೊಡ್ಡೂರು ಇತರರು ಇದ್ದರು