ಯಲ್ಲಾಪುರ: ಅಪಾಯ ಅವಘಡ ಎಷ್ಟೊತ್ತಿಗೆ ಎಲ್ಲಿ ಯಾವಾಗ ಸಂಭವಿಸುತ್ತದೆ ಎಂಬುದು ತಿಳಿಯದು.ಆದರೆ ವಿಪತ್ತು ಸಂಭವಿಸಿದ ಕ್ಷಣದಲ್ಲಿ ನಾವು ಅದನ್ನು ಎದುರಿಸುವಲ್ಲಿ ಸಫಲರಾಗಬೇಕು.ಇದಕ್ಕೆ ನಮಗೆ ತರಬೇತಿಯೂ ಬೇಕು.ಎಷ್ಟೋ ಸಂಗತಿಗಳ ಅರಿವಿದ್ದರೂ ಆ ಕ್ಷಣಕ್ಕೆ ನಮಗೆ ತೋಚದೇ ಇರುತ್ತದೆ. ಇಂತಹ ತರಬೇತಿ ಮಾಹಿತಿಗಳ ಮೂಲಕ ಪಡೆದ ಅನುಭವ ಅಂತಹ ಸಂದರ್ಭಕ್ಕೆ ಉಪಯೋಗಕ್ಕೆ ಬರುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ ವಿ ಪಾಯಸ್ ಹೇಳಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ.ಟ್ರಸ್ಟ್( ರಿ) ಯಲ್ಲಾಪುರ, ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ಧ.ಗ್ರಾ.ಸದಸ್ಯರಿಗೆ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ತರಬೇತಿಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾರ್ಗದರ್ಶನ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಕಾರ್ಯಕರ್ತರು ಎಂತಹುದೇ ವಿಪತ್ತು ಎದುರಾದಾಗಲೂ ಮುಂಚೂಣಿಯಲ್ಲಿದ್ದು ಎದುರಿಸಿದ್ದಾರೆ.ಪ್ರತಿ ಕಡೆಗಳಲ್ಲಿ ನಮ್ಮ ಸದಸ್ಯರಿಗೆ ತರಬೇತಿ, ಅಗತ್ಯ ಸಲಕರಣೆ ಪರಿಕರಗಳನ್ನು ಸಂಸ್ಥೆಯಿಂದ ನಿಡುತ್ತೇವೆ.ಯಾರೂ ಕೂಡಾ ಇದರ ದುರುಪಯೋಗ ಪಡೆಯದೇ ಆಕಸ್ಮಿಕ ಅವಘಡದಂತಹ ಸಂದರ್ಭದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉಧ್ಘಾಟಿಸಿ ಶುಭ ಕೋರಿದರು. ತಾ.ಪಂ ನ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತ ಡಾ.ರವಿ ಭಟ್ಟ, ಡಿ.ಎನ್.ಗಾಂವ್ಕಾರ್, ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ಜನಜಾಗೃತಿ ವೇದಿಕೆ ಶಿರಸಿ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಅಡಿಕೆ ವರ್ತಕ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಯೋಜನಾಧಿಕಾರಿ ಹನಮಂತು ನಾಯ್ಕ ಇದ್ದರು.ಅಗ್ನಿಶಾಮಕದಳದ ಠಾಣಾಧಿಕಾರಿ ವಿಪತ್ತು ನಿರ್ವಣೆಯ ಕಾರ್ಯಾಚರಣೆಯ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ತಿಳಿಸಿದರು. ಯೋಜನೆಯ ಯಲ್ಲಾಪುರ ವಿಭಾಗದ ನೂರರಷ್ಟು ಸದಸ್ಯರು ತರಬೇತಿಯ ಪ್ರಯೋಜನ ಪಡೆದುಕೊಂಡರು.