ಶಿರಸಿ: ನಗರದ ಹೃದಯಭಾಗದಲ್ಲಿರುವ ದೇವಿಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಪ್ರವಾಸಿಗರು ವೀಕ್ಷಿಸುವ ತಾಣವಾಗಿ ರೂಪಿಸಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಇಲ್ಲಿನ ದೇವಿಕೆರೆ ಪಕ್ಕವಾಹನ ನಿಲುಗಡೆಗೆ ಅನುಕೂಲವಾಗುವಂತೆ ಇಂಟರಲಾಕ್ ಅಳವಡಿಸುವ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಿದ ಬಳಿಕ ಕೆರೆ ವೀಕ್ಷಣೆ ನಡೆಸಿದರು.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು ಈಗಾಗಲೆ 2.5 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ. ಮೊದಲಿದ್ದ ಸ್ಥಿತಿಗಿಂತ ಕೆರೆ ಉತ್ತಮವಾಗಿ ಮಾರ್ಪಟ್ಟಿದೆ. ಸುತ್ತಲೂ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಪಥ ನಿರ್ಮಾಣಗೊಂಡಿದೆ ಎಂದರು.
ಕೆರೆಗೆ ಕಲುಷಿತ ನೀರು ಸೇರದಂತೆ ಎಚ್ಚರವಹಿಸಲು ನಗರಸಭೆಗೆ ಸೂಚಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ವಾಯುವಿಹಾರ ಪಥದ ಸುತ್ತ ಸುರಕ್ಷತಾ ಬೇಲಿ ಅಳವಡಿಸಬೇಕಿದೆ. ವಿದ್ಯುತ್ ದೀಪ, ಮಕ್ಕಳ ಆಟಿಕೆಗಳನ್ನು ಹಂತ ಹಂತವಾಗಿ ಅಳವಡಿಸಲಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಂದನ ಸಾಗರ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ, ಸದಸ್ಯ ರಾಜೇಶ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ ಇದ್ದರು.