ಕುಮಟಾ: ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು ಶ್ರೀರಾಮಚಂದ್ರಾಪುರ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಗೋಕರ್ಣದ ವಿಷ್ಣುಗುಪ್ತ ವಿಶ್ವ ವಿದ್ಯಾಲಯದಲ್ಲಿ ಭೇಟಿ ಆದ ಡಾ. ಜಿ.ಎಲ್.ಹೆಗಡೆ ಅವರ ಜೊತೆ ಯಕ್ಷಗಾನದ ಕುರಿತು ಶ್ರೀಗಳು ಸುಧೀರ್ಘ ಸಮಾಲೋಚನೆ ನಡೆಸಿ, ಯಕ್ಷಗಾನ ಕಲಿಕೆಯ ತರಗತಿಯನ್ನು ವಿಷ್ಣು ಗುಪ್ತ ವಿಶ್ವ ವಿದ್ಯಾಲಯದಲ್ಲೂ ನಡೆಸುತ್ತೇವೆ. ಯಕ್ಷಗಾನದ ಸಮಗ್ರ ವಿಕಾಸಕ್ಕೆ ಸಂಸ್ಥಾನ ಕೂಡ ಜೊತೆ ಇರಲಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಮಾದರಿಯ ಕಾರ್ಯಗಳು ನಡೆಯಲಿ ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ, ಪ್ರಮುಖರಾದ ಗುಹಾ ಶಂಕರ, ಸ್ವರ್ಣಗದ್ದೆ ಮಂಜುನಾಥ ಭಟ್ಟ, ಪ್ರಮೋದ ಪಂಡಿತ್, ಶ್ರೀಮತಿ ಮಾಯಾ ಜಿ.ಹೆಗಡೆ ಇತರರು ಇದ್ದರು.