ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಯೂ ಕೊರೋನಾ ಸೋಂಕು ದಿನೇ ದಿನೇ ಏರಿಕೆ ಕಾಣುತ್ತಿದ್ದು, ಜನತೆಗೆ ಇದು ತಲೆನೋವಾಗಿ ಪರಿಣಮಿಸಿದೆ. ಆದರೆ ಜನರು ಭಯ ಪಡುವ ಅಗತ್ಯ ಇಲ್ಲವಾಗಿದ್ದು, ಎಲ್ಲ ವಿಧದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಇಗಾಗಲೇ ಕಠಿಣ ನಿಯಮಗಳೂ ಜಾರಿಯಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಗುರುವಾರ 27 ಶಾಲಾ ವಿದ್ಯಾರ್ಥಿಗಳಲ್ಲಿ ಹಾಗೂ 6 ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಕಾರವಾರ ಶೈಕ್ಷಣಿಕ ಜಿಲ್ಲೆಯ ಕಾರವಾರದಲ್ಲಿ 14 ಹಾಗೂ ಕುಮಟಾದಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಾರವಾರದಲ್ಲಿ ಇಬ್ಬರು ಶಿಕ್ಷಕರು, ಭಟ್ಕಳದಲ್ಲಿ ಒಬ್ಬರು ಹಾಗೂ ಕುಮಟಾದಲ್ಲಿ ಒಬ್ಬ ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 11 ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕರವತ್ತಿಯಲ್ಲಿ 9, ಹಳಿಯಾಳ ಒಬ್ಬ ಹಾಗೂ ಮುಂಡಗೋಡದಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್ ಸೋಂಕು ತಗುಲಿದೆ. ಹಳಿಯಾಳದಲ್ಲಿ ಒಬ್ಬರು ಹಾಗೂ ಶಿರಸಿಯಲ್ಲಿ ಒಬ್ಬ ಶಿಕ್ಷಕರಿಗೆ ಗುರುವಾರ ಕೋವಿಡ್ ಸೋಂಕು ತಗುಲಿದೆ ಎಂದು ವರದಿ ಹೇಳಿದೆ. ಈ ದಿಸೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು, ಜನತೆ ಸಹ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಿದೆ.