
ಕುಮಟಾ: ಇಲ್ಲಿನ ಲಾಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲಾಯನ್ ಅನಂತ ಕಾಮತ, ಕಾರ್ಯದರ್ಶಿಯಾಗಿ ಹೃಷಿಕೇಶ ನಾಯಕ ಹಾಗೂ ಕೋಶಾಧಿಕಾರಿಯಾಗಿ ರವೀಂದ್ರ ನಾಯ್ಕ ಪ್ರಮಾಣ ವಚನ ಸ್ವೀಕರಿಸಿದರು.
ಲಾಯನ್ಸ್ ಸೇವಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಲಾಯನ್ ವಿನಯಾ ಎಸ್. ಹೆಗಡೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಸಾಮಾಜಿಕ ಸೇವಾ ಕಾರ್ಯಗಳು ಸಂಸ್ಥೆ ಮತ್ತು ಸಮಾಜವನ್ನು ಬೆಸೆಯುವ ಕೊಂಡಿಯಂತೆ ಕಾರ್ಯನಿರ್ವಹಿಸುತ್ತವೆ. ಕಳೆದ ವರ್ಷ ಲಾಯನ್ಸ್ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಕೊರೊನಾ ಜಾಗೃತಿ ಸಂಬಂಧಿಸಿದ ಹಲವಾರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಅಲ್ಲದೇ, ಗೋಕರ್ಣ ಅಶೋಕೆಯ ವಿದ್ಯಾಸಂಸ್ಥೆಯಲ್ಲಿ ಕುಟಿರ ನಿರ್ಮಿಸಿದೆ. ಮಹಿಳಾ ಸಬಲೀಕರಣ ಯೋಜನೆಯ ಹೊಲಿಗೆ ತರಬೇತಿಯ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಹಾಗೂ ಸರ್ಕಾರಿ ಆಸ್ಪತ್ರೆಗೆ ವೀಲ್ ಚೆರ್, ಟ್ರಾಲಿ ಮುಂತಾದವುಗಳನ್ನು ದೇಣಿಗೆ ನೀಡಿದ್ದು ಉಲ್ಲೇಖನೀಯ ಎಂದರು.
ನಿಕಟಪೂರ್ವ ಪ್ರಾಂತಪಾಲ ಪಿಎಮ್‌ಜೆಎಫ್ ಡಾ.ಗಿರೀಶ ಕುಚಿನಾಡ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕುಮಟಾ ಲಾಯನ್ಸ್ ಕ್ಲಬ್‌ನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಎಮ್‌ಜೆಎಫ್ ಲಯನ್ ಮನೋಜ್ ಮನೆಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಎಮ್‌ಜೆಎಫ್ ಡಾ. ಎಸ್.ಎಸ್.ಹೆಗಡೆ, ಚಾರ್ಟರ್ ನಿಟೆ ಚೇರ್ಮನ್ ರಾಮ್ ಪೈ, ಚಾರ್ಟರ್ ಸದಸ್ಯರಾದ ಡಾ ವರ್ಣೆಕರ, ಡಿ.ಡಿ.ಶೇಟ್ ಸೇರಿದಂತೆ ಕುಮಟಾ, ಹೊನ್ನಾವರ, ಅಂಕೋಲಾ ಲಾಯನ್ಸ್ ಕ್ಲಬ್‌ನ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ನೇಹಾ ಹೆಗಡೆ ಪ್ರಾರ್ಥಿಸಿದರು. ಲಾಯನ್ ಎಮ್.ಎನ್.ಹೆಗಡೆ ನಿರೂಪಿಸಿದರು.