ಸಿದ್ದಾಪುರ: ತಾಲೂಕಿನ ನಿಲ್ಕುಂದ ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಮದ್ಯಮಾರಾಟ ವಿರೋಧಿಸಿ ಗ್ರಾಪಂ ಅಧ್ಯಕ್ಷ ರಾಜಾರಾಮ ರಾಮಚಂದ್ರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು.
ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಶಾಲಾ ಮಕ್ಕಳು, ಮಹಿಳೆಯರು, ರೈತರು ಪ್ರತಿ ನಿತ್ಯ ಸಂಕಟ ಪಡಬೇಕಾಗಿದೆ. ಕೂಲಿ ಮಾಡಿ ಜೀವನ ನಡೆಸುವವರ ಕಟುಂಬದವರು ಮತ್ತಷ್ಟು ಸಂಕಟ ಪಡುವ ಸ್ಥಿತಿ ಉಂಟಾಗಿದೆ. ಅಬಕಾರಿ ಇಲಾಖೆಯವರು ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಗೊತ್ತಿದ್ದರೂ ಅವರ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ಜನರಿಗೆ ರಕ್ಷಣೆ ನೀಡಬೇಕಾದವರು ಮೌನ ವಹಿಸುತ್ತಿದ್ದಾರೆ ಎಂದು ಪ್ರಮುಖರಾದ ಗಣೇಶ ಭಟ್ಟ ಕಾಜಿನಮನೆ, ಎಂ.ಎಸ್.ಹೆಗಡೆ ನೇರ್ಲಮನೆ, ಮಂಜು ಬಡಗಿ, ಗಣಪತಿ ಬಡಗಿ, ಶಾರದಾ ಹೆಗಡೆ, ಶೋಭಾ ಬೋವಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆಯ ಉಪಾಧೀಕ್ಷಕ ಮಹೇಂದ್ರ ನಾಯ್ಕ, ಹಾಗೂ ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯಕ ಅವರು ಅನಧಿಕೃತವಾಗಿ ಮದ್ಯ ಮಾರಾಟಮಾಡುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗವುದು ಎಂದು ಬರವಸೆ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ನೇತ್ರಾವತಿ ಪ್ರಶಾಂತ ಮಡಿವಾಳ, ಸದಸ್ಯರಾದ ಪಿ.ಟಿ.ಹೆಗಡೆ, ರಾಘವೇಂದ್ರ ಹೆಗಡೆ, ಮಂಗಲಾ ಮುಕ್ರಿ, ಸವಿತಾ ಚನ್ನಯ್ಯ, ಬೀಟ್ ಪೊಲೀಸ್ ಸುನೀಲ ಜೆ. ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.