
ಕುಮಟಾ: ಪಟ್ಟಣದ ಹೃದಯ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದಿದ್ದ ಓಮಿನಿ ಸ್ಟಾಂಡ್‌ನಲ್ಲಿ ವಾಹನ ನಿಲ್ಲಿಸಲು ಸಾಧ್ಯವಾಗದೇ ಚಾಲಕರು ಪರದಾಡುವಂತಾಗಿದ್ದು, ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಓಮಿನಿ ಮಾಲಕ-ಚಾಲಕರ ಸಂಘವು ತಾಲೂಕಾಡಳಿತವನ್ನು ಒತ್ತಾಯಿಸಿದೆ.
ಪಟ್ಟಣದ ಮಾಸ್ತಿಕಟ್ಟೆ ಬಳಿ ಕಳೆದ ಹಲವು ವರ್ಷಗಳಿಂದ ಮಹಾಸತಿ ಓಮಿನಿ ಸ್ಟಾಂಡ್ ನಿರ್ಮಿಸಿಕೊಂಡು ಅಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಆಯ್.ಆರ್.ಬಿ ಕಂಪನಿಯು ಚತುಷ್ಪತ ರಸ್ತೆ ನಿರ್ಮಾಣದ ನೆಪದಲ್ಲಿ ರಸ್ತೆಯ ಪಕ್ಕದಲ್ಲಿ ಬ್ರಹದಾಕಾರದ ಕಾಲುವೆ ಕೊರೆದು ವಾಹನ ನಿಲ್ಲಿಸಲು ಸಾಧ್ಯವಾಗದಂತೆ ಮಾಡಿದೆ. ಇದರಿಂದ ಹೈರಾಣಾಗಿರುವ ಚಾಲಕರು ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದು, ಅಪಘಾತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಉಪವಿಭಾಗಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸಬೇಕು ಎಂದು ಓಮಿನಿ ಚಾಲಕರಾದ ಅಣ್ಣಪ್ಪ ನಾಯ್ಕ. ಹರಿಹರ ನಾಯಕ, ಗಣಪತಿ ಮಡಿವಾಳ, ಅಲೀಂ ಬುಡನ್ ಶೇಖ್, ಸಂತೋಷ ಮುಕ್ರಿ. ಶೇಖರ ಮುಕ್ರಿ ಆಗ್ರಹಿದ್ದಾರೆ.
ಈ ಬಗ್ಗೆ ಉಪವಿಭಾಗಾಧಿಕಾರಿ ಎಮ್. ಅಜಿತ ರೈ ಪ್ರತಿಕ್ರಿಯಿಸಿ ಓಮಿನಿ ಚಾಲಕರ ಸಮಸ್ಯೆ ಪರಿಹರಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಯ್.ಆರ್.ಬಿ ಕಂಪನಿಯವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸುತ್ತೇನೆ ಎಂದರು.