ಕಾರವಾರ: ಐದಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ದಾಖಲಾದ ಶಾಲೆಗಳನ್ನ ಮಾತ್ರ ಒಂದು ವಾರಗಳ ಕಾಲ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳನ್ನ ಬಂದ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದ ಹಿನ್ನಲೆಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಸದ್ಯ ಕಾರವಾರ ನಗರದ ಬಾಲಮಂದಿರ ಹಾಗೂ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಒಂದು ವಾರಗಳ ಕಾಲ ಬಂದ ಮಾಡಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಕಣ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿಲ್ಲ. ಈ ಹಿನ್ನಲೆಯಲ್ಲಿ ಎಲ್ಲಾ ಶಾಲಾ ಕಾಲೇಜು ಬಂದ್ ಮಾಡಲು ಅನಿವಾರ್ಯ ಎದುರಾಗಿಲ್ಲ. ಆದರೆ ಐದಕ್ಕಿಂತ ಹೆಚ್ಚಿನ ಪ್ರಕರಣ ಯಾವ ಶಾಲೆಯಲ್ಲಿ ಕಂಡು ಬರುವುದೋ ಅದನ್ನ ಕ್ಲಸ್ಟರನ್ನಾಗಿ ಮಾಡಿ ವಾರಗಳ ಕಾಲ ಬಂದ್ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಸೋಂಕು ಹರಡುವುದನ್ನ ತಡೆಯಲು ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಪ್ರತಿನಿತ್ಯ ಎಷ್ಟು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಎಷ್ಟು ಸ್ಯಾಂಪಲ್ ಸಂಗ್ರಹಿಸಲಾಗಿದೆ ಎಂದು ನೋಡೆಲ್ ಅಧಿಕಾರಿಗಳು ವರದಿಯನ್ನ ನೀಡಲಿದ್ದು ವರದಿಯನ್ವಯ ಕ್ಲಸ್ಟರ್ ಪ್ರಕಾರ ಬಂದ್ ಮಾಡುವ ಕ್ರಮ ಕೈಗೊಳ್ಳಲಾಗುವುದು.
ಶಾಲಾ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಜೊತೆಗೆ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಅನವಶ್ಯಕವಾಗಿ ದೂರದ ಊರುಗಳಿಗೆ ಪ್ರಯಾಣ ಸದ್ಯದ ಮಟ್ಟಿಗೆ ಮಾಡಬಾರದು. ಒಂದೊಮ್ಮೆ ಹೋಗುವುದಾದರೆ ಆಯಾ ಶಾಲಾ ಕಾಲೇಜಿನ ಮುಖ್ಯಸ್ಥರ ಅನುಮತಿ ಪಡೆದು ಹೋಗಬೇಕು. ವಾಪಾಸ್ ಬಂದ ನಂತರ ಕ್ವಾರಂಟೈನ್ ಆಗಿ ಸೋಂಕಿನ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡಿಸಿಕೊಂಡು ಮುಂಜಾಗೃತೆ ವಹಿಸಬೇಕು ಎಂದರು.
ಇನ್ನು ಅಂಗನವಾಡಿಗಳಲ್ಲಿ ಕಾರ್ಯಕರ್ತರಿಗೆ ಶಿಕ್ಷಕರಿಗೆ ಯಾರಿಗೆ ಪಾಸಿಟಿವ್ ಬಂದರು ಆಯಾ ಅಂಗನವಾಡಿ ಬಂದ್ ಮಾಡಲಾಗುವುದು. ಅಲ್ಲದೇ ಮಕ್ಕಳಲ್ಲಿ ಪಾಸಿಟಿವ್ ಬಂದರು ಬಂದ್ ಮಾಡಲಾಗುವುದು. ಅಂಗನವಾಡಿಯಲ್ಲಿ ಕೆಲಸ ಮಾಡುವವರಿಗೆ ಹದಿನೈದು ದಿನಕ್ಕೊಮ್ಮೆ ಸ್ಯಾಂಪಲ್ ಸಂಗ್ರಹಿಸಲಾಗುವುದು. ಈ ವರೆಗೆ ಜಿಲ್ಲೆಯಲ್ಲಿ 6 ವರ್ಷದ ಒಳಗಿನ 6 ವಿದ್ಯಾರ್ಥಿಗಳಿಗೆ, 7 ರಿಂದ 12 ವರ್ಷದ ಒಳಗಿನ 15 ವಿದ್ಯಾರ್ಥಿಗಳಿಗೆ ಹಾಗೂ 13 ರಿಂದ 18 ವರ್ಷದ ಒಳಗಿನ 41 ವಿದ್ಯಾರ್ಥಿಗಳಿಗೆ ಸೇರಿ ಒಟ್ಟು 52 ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.