ಕಾರವಾರ: ಜ. 17 ಮತ್ತು 18ರಂದು ಆಚರಿಸಲ್ಪಡುವ ಕೂರ್ಮಗಡ ನರಸಿಂಹ ದೇವರ ಜಾತ್ರೆಯ ವಾರ್ಷಿಕ ಉತ್ಸವವನ್ನು ಕೋವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಕೇವಲ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಅನುಸರಿಸಲು ಸೂಚಿಸಲಾಗಿದ್ದು, ಪ್ರಸ್ತುತ ವರ್ಷ ಪೂಜಾ ಕಾರ್ಯಕ್ರಮಗಳಿಗೆ ತೆರಳುವ ಭಕ್ತರು ಜಿಲ್ಲಾಡಳಿತ ವಿಧಿಸಿರುವ ನಿಯಮ, ಷರತ್ತುಗಳನ್ನು ಪಾಲಿಸಬೇಕೆಂದು ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಕೆ ಹೊತ್ತ ಮೀನುಗಾರರು ಮಾತ್ರ ಕುರ್ಮಗಡ ನಡುಗಡ್ಡೆಗೆ ಮೀನುಗಾರಿಕಾ ಇಲಾಖೆಯು ಅನುಮತಿಸಿದ ಪರ್ಷಿಯನ್ ಬೋಟ್‍ಗಳಲ್ಲಿ ತೆರಳಲು ಅವಕಾಶ ಇರುತ್ತದೆ. ಅರ್ಹರು ತಮ್ಮ ಹೆಸರುಗಳನ್ನು ಜ.14ರೊಳಗಾಗಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ನೋಂದಾಯಿಸಿಕೊಂಡವರಿಗೆ ತಹಶೀಲ್ದಾರ ಕಚೇರಿಯಿಂದ ಪಾಸ್ ಹಂಚಿಕೆ ಮಾಡಲಾಗುವುದು.
15ವರ್ಷ ಕೆಳಗಿನ ಮತ್ತು 60ವರ್ಷ ಮೇಲ್ಪಟ್ಟವರಿಗೆ ಪೂಜಾ ಕಾರ್ಯಗಳಿಗೆ ನಡುಗಡ್ಡೆಗೆ ತೆರಳಲು ಅವಕಾಶವಿರುವುದಿಲ್ಲಾ. ಕೋವಿಡ್ 19 ಲಕ್ಷಣಗಳಿರುವವರಿಗೂ ಸಹ ಕುರ್ಮಗಡಕ್ಕೆ ತೆರಳುವ ಅವಕಾಶ ನಿಷೇಧಿಸಲಾಗಿದೆ. ಅಲ್ಲಿ ತೆರಳುವವರು ಕಡ್ಡಾಯವಾಗಿ 2ಡೋಸ್ ಕೋವಿಡ್ 19 ಲಸಿಕೆ ಪಡೆದಿರತಕ್ಕದ್ದು. ಹೊರಜಿಲ್ಲೆ/ರಾಜ್ಯದವರಿಗೆ ಪೂಜೆಗೆ ತೆರಳಲು ಅವಕಾಶವಿಲ್ಲ. ಹರಕೆ ಹೊತ್ತವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಜಿಲ್ಲಾಡಳಿತವು ಬದ್ದವಾಗಿರುತ್ತದೆ. ಈ ದಿಶೆಯಲ್ಲಿ ತೆಗೆದುಕೊಂಡ ಪ್ರಯತ್ನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅವರು ವಿನಂತಿಸಲಾಗಿದೆ.