ಹೊನ್ನಾವರ : ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ಮತ್ತೆ ಕಡಲಾಮೆ ಮೊಟ್ಟೆ ಇಟ್ಟಿದ್ದು, ಖಾಸಗಿ ಕಂಪನಿ ಕಾರ್ಮಿಕರು ಅದರ ಕುರುಹುಗಳು ಕಾಣದಂತೆ ಮರೆಮಾಚುವ ಉದ್ದೇಶದಿಂದ ಆಮೆಯ ಹೆಜ್ಜೆ ಗುರುತು ಅಳಿಸಿದ್ದಾರೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.
ಬುಧವಾರ ನಸುಕಿನ ವೇಳೆ ಟೊಂಕ (ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶ) ದಲ್ಲಿ ಕಂಪನಿಯ ಕಾರ್ಮಿಕರು ಹೆಚ್ಚು ಪ್ರಕಾಶಮಾನ ಬೀರುವ ಟಾರ್ಚ್ ಬಿಡುತ್ತಿರುವುದು ಅಲ್ಲಿ ಮೀನುಗಾರಿಕೆ ನಡೆಸುತ್ತಿರುವವರು ಕಣ್ಣಿಗೆ ಬಿದ್ದಿದೆ. ಕೂಡಲೇ ಮೀನುಗಾರರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸ್ಥಳೀಯರು ಆ ಸ್ಥಳಕ್ಕೆ ಬಂದಾಗ ಆಮೆ ಮೊಟ್ಟೆ ಇಡಲು ಹತ್ತಿದ ಕುರುಹುಗಳು ಅಳಿಸಿರುವುದು ಕಂಡಿವೆ. ಮುಂಜಾನೆ ವೇಳೆಯಲ್ಲಿ ಸ್ಥಳಿಯರೆಲ್ಲರೂ ಸೇರಿ ಆಮೆ ಮೊಟ್ಟೆಯ ಶೋಧ ಕಾರ್ಯ ನಡೆಸಿದಾಗ ಆಮೆ ಮೊಟ್ಟೆ ಇಟ್ಟಿರುವುದು ದೃಢಪಟ್ಟಿದೆ.
ಕಡಲಾಮೆ ಮೊಟ್ಟೆ ಸಂರಕ್ಷಣೆಯ ಪಣ ತೊಟ್ಟಿರುವ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮೊಟ್ಟೆಗಳನ್ನು ಪರಿಶೀಲಿಸಿ ಅದರ ಸಂರಕ್ಷಣೆಗೆ ಪಂಜರ ನಿರ್ಮಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆ ಇಡದಂತೆ ಹಾಗೂ ಅದು ಆಮೆ ಮೊಟ್ಟೆ ಇಟ್ಟಿರುವ ಮಾಹಿತಿ ಇಲಾಖೆಗೆ ತಿಳಿಯದಂತೆ ಅಪರಾಧ ಎಸಗುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ ಹಾಗೂ ಗ್ರಾಮ ಮಟ್ಟದಲ್ಲಿ ಜೀವ ವೈವಿದ್ಯತಾ ಸಮಿತಿ ರಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಯಾವುದೇ ಮಾಹಿತಿ ಪಡೆಯದೆ ಚೆನೈನ ತಂಡವೊಂದು ಕಾಸರಕೊಡ್ ಕಡಲ ತೀರ ಆಮೆಗಳು ಮೊಟ್ಟೆ ಇಡುವ ಪ್ರದೇಶವಲ್ಲ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅದನ್ನೇ ಸತ್ಯ ಎಂದು ಬಿಂಬಿಸಲು ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾರ್ಮಿಕರು ಆಮೆಗಳು ಈ ಪ್ರದೇಶಕ್ಕೆ ಬಾರದಂತೆ ಮಾಡಲು ಹೆಚ್ಚೆಚ್ಚು ಪ್ರಕಾಶಮಾನ ಬೀರುವ ಟಾರ್ಚ್ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೂಡ ನೀಡಿದ್ದೇವೆ. ಗ್ರಾಮ ಸಭೆಯಲ್ಲೂ ಕೂಡ ಈ ವಿಷಯ ಪ್ರಸ್ತಾಪಿಸಿ ಠರಾವು ಮಾಡಿದ್ದೇವೆ. ಅದರಂತೆ ಇಂದು ಮುಂಜಾನೆ ಆಮೆ ಮೊಟ್ಟೆ ಇಟ್ಟು ಹೋದ ಹೆಜ್ಜೆ ಗುರುತನ್ನು ಅಳಿಸಿದ್ದಾರೆ. ಮೀನುಗಾರರಿಗೆ ಆಮೆ ಮೊಟ್ಟೆ ಇಡುವ ಸ್ಥಳ ನಿಖರವಾಗಿ ತಿಳಿಯುವುದರಿಂದ ಇಂದು ಆಮೆ ಮೊಟ್ಟೆ ಇಟ್ಟ ಜಾಗವನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಹಾಗೆ ಆಮೆಯ ವಿಷಯದಲ್ಲಿ ವಿಕೃತ ಮೆರೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದೇವೆ.