ಹೊನ್ನಾವರ : ತಾಲೂಕಿನಲ್ಲಿ ಮೂರುವರೆ ವರ್ಷದಿಂದ ಹಲವು ಜನಪರ ಯೋಜನೆಗಳು ಅನುಷ್ಠಾನವಾಗಲಿದೆ. ಸತತ 2 ವರ್ಷಗಳ ಪರಿಶ್ರಮದ ಫಲವಾಗಿ ಆರ್.ಟಿ.ಓ ಕಛೇರಿ ನಿರ್ಮಾಣಕ್ಕೆ 2 ಎಕರೆ 19 ಗುಂಟೆ ಸ್ಥಳ ಮಂಜೂರಿಯಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ರಾಮತೀರ್ಥ ಎಪಿಎಂಸಿ ಎದುರು ಆರ್. ಟಿ. ಓ. ಕಚೇರಿಯ ಭವ್ಯ ಕಟ್ಟಡಕ್ಕೆ ಸ್ಥಳ ಮಂಜೂರಿಯಾಗಿದೆ. ಬಸ್ ರಿಪೇರಿ ಮಂಜೂರಾತಿ ಬಗ್ಗೆ ಶಾಸಕ ಸುನೀಲ ನಾಯ್ಕ ಜೊತೆಗೂಡಿ ಪ್ರಯತ್ನಿಸುತ್ತಿದ್ದು, ಈ ಬೇಡಿಕೆಯೂ ಮುಂಬರುವ ದಿನದಲ್ಲಿ ಈಡೇರಲಿದೆ. 4 ಕೋಟಿ ಹಣ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಕ್ಷೇತ್ರಕ್ಕೆ ಮಂಜೂರಾಗಿದ್ದು, ವಿವಿಧ ಕಾಮಗಾರಿ ಚಾಲ್ತಿಯಲ್ಲಿದೆ. ರಾಜ್ಯ ಸರ್ಕಾರ ಪ.ಪಂಗೆ 5 ಕೋಟಿ ಪುರಸಭೆಗೆ 10 ಕೋಟಿ ಅನುದಾನ ಈಗಾಗಲೇ ಅನುಮೋದನೆ ನೀಡಿದ್ದು, ಇದರಿಂದ ಪಟ್ಟಣದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯಲಿದೆ ಎಂದರು.
ಈಗಾಗಲೇ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದ್ದು, ಮುಂದೆ ಬಾಕಿ ಇರುವ ರಸ್ತೆ ಕಾಮಗಾರಿ ನಡೆಸಲಾಗುವುದು. ಕೆಳಗಿನಪಾಳ್ಯದಲ್ಲಿ 1 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕ್ಷೇತ್ರದಲ್ಲಿ ಉಪ್ಪುನೀರು ನುಗ್ಗಿ ರೈತರ ಬೆಳೆಗೆ ಹಾನಿ ಸಂಭವಿಸುತ್ತಿತ್ತು. ಇದನ್ನು ಬಗೆಹರಿಸಲು ವಿಶೇಷ ಪ್ರಯತ್ನ ನಡೆಸಿದ ಪರಿಣಾಮ 100ಕೋಟಿ ವೆಚ್ಚದಲ್ಲಿ ಕಾಲೆರ್ಂಡ್ ನಿರ್ಮಾಣ ಮಾಡಲು ಈಗಾಗಲೇ ಮಂಜೂರಾತಿ ದೊರೆತಿದೆ. ವಿವಿಧ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಒದಗಿಸಲು ಗ್ರಾಮೀಣ ಭಾಗದ ಅಭಿವೃದ್ದಿಗಾಗಿ 52 ಕೋಟಿ ಅನುದಾನ ಬಿಡುಗಡೆಯ ಹಂತದಲ್ಲಿದೆ. ಪಟ್ಟಣ ಹಾಗೂ ಗ್ರಾಮೀಣಭಾಗದ ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ವಿಶೇಷ ಒತ್ತು ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ತಾಲೂಕಿನಲ್ಲಿ ಬಸ್ ನಿಲ್ದಾಣದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹಿಂದಿನ ಸರ್ಕಾರದಲ್ಲಿ ಕೇವಲ ಚಾಲನೆ ನೀಡಿ ಟೆಂಡರ್ ಪ್ರಕ್ರಿಯೆ ನಡೆಯದೆ ಇದ್ದ ಶರಾವತಿ ಕುಡಿಯುವ ನೀರಿನ ಯೋಜನೆ ಡಿಸೆಂಬರ್ ಒಳಗೆ ಮುಕ್ತಾಯವಾಗಲಿದೆ ಇದರಿಂದ ಪಟ್ಟಣ ಹಾಗೂ 9 ಗ್ರಾ.ಪಂ. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಪದವಿ ಕಾಲೇಜಿನ ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದಿದ್ದು, ಪ್ರಸುತ್ತ ತರಗತಿ ನಡೆಯುತ್ತಿದ್ದು ಇದರ ಪ್ರಯೋಜನ ತಾಲೂಕಿನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಮುಂದಿನ ದಿನದಲ್ಲಿಯೂ ಕ್ಷೇತ್ರದ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ,ಸದಸ್ಯರಾದ ವಿಜಯ ಕಾಮತ್,ನಾಗರಾಜ ಭಟ್,ಸುಜಾತಾ ಮೇಸ್ತ, ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ,ಉಮೇಶ ನಾಯ್ಕ, ಎಂ,ಎಸ್.ಹೆಗಡೆ ಕಣ್ಣಿ, ಶ್ರೀಕಾಂತ ಮೋಗೇರ, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು