ಅಂಕೋಲಾ : ಮಾನವರಾದ ನಾವು ಸಮಾಜಕ್ಕೆ ಏನನ್ನಾದರೂ ಕೊಟ್ಟು ಹೋಗಬೇಕು ಅಥವಾ ಏನನ್ನಾದರೂ ಬಿಟ್ಟು ಹೋಗಬೇಕು. ಅನ್ಯರಿಗೆ ಅನುಕೂಲವಾಗುವ ಮಾನವೀಯ ಕೆಲಸ ನಮ್ಮಿಂದಾಗಬೇಕು. ಆತ್ಮಸಾಕ್ಷಿ ಮತ್ತು ಆತ್ಮಗೌರವಕ್ಕೆ ಅನುಗುಣವಾಗಿ ನಮ್ಮ ವರ್ತನೆ ಇರಬೇಕು. ವಿವೇಕಾನಂದರ ಆದರ್ಶ ಗುಣವನ್ನು ಜೀವನ ಪರ್ಯಂತ ಅನುಸರಿಸಬೇಕು ಎಂದು ಲಯನ್ಸ ಕ್ಲಬ್ ಕರಾವಳಿಯ ಸದಸ್ಯ ಮಹಾಂತೇಶ ರೇವಡಿ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ.ಶಿಕ್ಷಣ ಮಹಾವಿದ್ಯಾಲಯ ಹಾಗೂ ಲಯನ್ಸ ಕ್ಲಬ್ ಕರಾವಳಿಯ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನದಲ್ಲಿ ಮಾತನಾಡುತ್ತಾ ಪ್ರತಿಯೊಬ್ಬರು ಆದರ್ಶವನ್ನು ಒಂದು ದಿನ ನೆನಸಿಕೊಂಡು ಮರೆಯುವ ಜಾಯಮಾನ ಬಿಡಬೇಕು ಎಂದರು.
ಇನ್ನೋರ್ವ ಲಯನ್ಸ ಸದಸ್ಯ ಹಸನ್ ಶೇಖ ಅವರು ಎಲ್ಲಾ ಧರ್ಮಗಳ ಸಾರ ಮಾನವ ಧರ್ಮ ಹಾಗಾಗಿ ಅದರಂತೆ ನಡೆದುಕೊಳ್ಳಬೇಕು. ಅದೇ ರೀತಿ ಶಿಕ್ಷಕರು ವ್ಯವಹಾರಿಕ ಜ್ಞಾನ ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ. ಹೆಗಡೆ ವಿವೇಕಾನಂದರ ಪ್ರತಿಯೊಂದು ಸಂದೇಶವು ಜೀವನ ಮಾರ್ಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಕರಾವಳಿಯ ಕಡೆಯಿಂದ ಸ್ವಾಮಿ ವಿವೇಕಾನಂದರ ಪುಸ್ತಕ ನೀಡಲಾಯಿತು. ವಿದ್ಯಾರ್ಥಿನಿ ವೈಶಾಲಿ ರಚಿಸಿದ ವಿಡಿಯೋ ಪ್ರದರ್ಶಿಸಲಾಯಿತು. ಪೂಜಾ ಗೌಡ ಮಾತನಾಡಿದರು. ಸೌಮ್ಯ ಪ್ರಾರ್ಥಿಸಿದರು. ಪೂರ್ವಿ ಹಲ್ಗೇಕರ ಸ್ವಾಗತಿಸಿದರು. ನಾಗರತ್ನಾ ಹಳ್ಳೇರ ವಂದಿಸಿದರು. ದಿಶಾ ನಾಯಕ ನಿರೂಪಿಸಿದರು. ಲಯನ್ಸ ಸದಸ್ಯ ಗಣಪತಿ ನಾಯಕ ಎನ್.ಎಸ್.ಎಸ್. ಅಧಿಕಾರಿಗ ರಾಘವೇಂದ್ರ ಅಂಕೋಲೇಕರ ಹಾಗೂ ಪ್ರವೀಣಾ ನಾಯಕ ವೇದಿಕೆಯಲ್ಲಿದ್ದರು.