ಯಲ್ಲಾಪುರ: ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ನಿಜವಾದ ಆನಂದದ ಅನುಭೂತಿ ಆಗುತ್ತದೆ ಎಂದು ಗೋವರ್ಧನ ಸೇವಾ ಸಮೀತಿಯ ಕಾರ್ಯದರ್ಶಿ ವಿದ್ವಾನ್ ಗಣಪತಿ ಭಟ್ಟ ಕೋಲಿಬೇಣ ಹೇಳಿದರು.
ಅವರು ಬುಧವಾರ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಪಟ್ಟಣದ ಅಡಕೆ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ನಾವು ಜೀವಿತದ ಪ್ರತಿ ಕ್ಷಣವನ್ನು ಅನುಭವಿಸಬೇಕು, ಆಸ್ವಾದಿಸಬೇಕು. ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಮರ್ಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಸಿದ ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್. ವಿ ಹೆಗಡೆ ಮಾತನಾಡಿ, ಸಮಿತಿಯವರು ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ ಭಟ್ಟ ಶೀಗೆಪಾಲ, ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ, ಜಿಲ್ಲಾ ಯುವ ಪ್ರಭಾರಿ ದಿವಾಕರ ಮರಾಠಿ, ಪತಂಜಲಿ ಯೋಗ ಸಮಿತಿ ಉಪಾಧ್ಯಕ್ಷ ನಾಗೇಶ ರಾಯ್ಕರ್, ಕಾರ್ಯದರ್ಶಿ ಸತೀಶ ಹೆಗಡೆ, ಸುಬ್ರಾಯ ಭಟ್ಟ, ಜಿ. ಎಸ್. ಭಟ್ಟ ಹಳವಳ್ಳಿ, ರಾಮಕೃಷ್ಣ ಕವಡಿಕೆರೆ ಭಾಗವಹಿಸಿದ್ದರು. ಸೂರ್ಯನಮಸ್ಕಾರ, ಯೋಗ ಹಾಗೂ ಅಗ್ನಿಹೊತ್ರ ಕಾರ್ಯಕ್ರಮ ನಡೆಯಿತು.