ಕಾರವಾರ: ವಿಧಾನ ಪರಿಷತ್ ನಿಕಟಪೂರ್ವ ಸದಸ್ಯ ಎಸ್.ಎಲ್.ಘೋಟ್ನೇಕರ್ ಮರಾಠ ಸಮಾಜದ ಹೆಸರಿನಲ್ಲಿ ಮಂಜೂರಾದ ವಿವಿಧ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಬೀತಾಗಿದ್ದು, ತಮ್ಮ ಮಾತಿನಂತೆಯೇ ರಾಜಕೀಯ ನಿವೃತ್ತಿ ಪಡೆಯಲು ಸಕಾಲ ಒದಗಿಬಂದಿದೆ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಪಾಧ್ಯಕ್ಷ ನಾಗೇಂದ್ರ ಜಿವೋಜಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ದುರುಪಯೋಗವಾಗಿರುವುದರ ಬಗ್ಗೆ ಖುದ್ದು ನಾನೇ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೆ. ದೂರು ಆಧರಿಸಿ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಅನುದಾನ ದುರ್ಬಳಕೆ ಆಗಿದೆ ಎಂದು ವರದಿ ನೀಡಿದ್ದರು. ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಕಳೆದ ವರ್ಷ ಮಾರ್ಚ್ 14 ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ. ಈ ಬಗ್ಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಅವರು ತನಿಖೆ ನಡೆಸಿ, ಲೋಕಾಯುಕ್ತ ಪ್ರಧಾನ ಕಚೇರಿಗೆ ವರದಿ ನೀಡಿದ್ದರು.
ವರದಿ ಪರಿಶೀಲಿಸಿದ ಬಳಿಕ ಘೋಟ್ನೆಕರ್ ಮತ್ತು ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ರಾಯಣ್ಣ ಅರಶೀಣಗೇರಿ ವಿಚಾರಣೆಗೆ ಹಾಜರಾಗಿದ್ದರು. ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತರು ಘೋಟ್ನೆಕರ್ ಮತ್ತು ಅರಶಿಣಗೇರಿ ಹಾಗೂ ಕೆಲವು ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅನುದಾನ ದುರ್ಬಳಕೆ ಮಾಡಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಘೋಟ್ನೆಕರ್ ಹೇಳಿದ್ದರು. ಈಗ ಅವರು ರಾಜಕೀಯ ನಿವೃತ್ತಿ ಘೋಷಿಸಲು ಸಕಾಲ ಎಂದು ಜಿವೋಜಿ ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ಘೋಟ್ನೇಕರ್ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ತಮ್ಮ ಮಾಲಿಕತ್ವದ ಶಾಲೆಗೆ ತೆರಳುವ ರೋಡಿಗೆ ಹಾಗೂ ಎಮ್ಎಲ್ಸಿ ಅನುದಾನದಿಂದ ಶಾಲೆ ನಿರ್ಮಾಣಕ್ಕೆ ಸಾಕಷ್ಟು ಹಣ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ, ನೂತನವಾಗಿ ನಿರ್ಮಿಸಿದ ಹೊಟೆಲ್ ರೋಡಿಗೂ ಎಮ್ಎಲ್ಸಿ ಹಣ ವಿನಿಯೋಗಿಸಿದ್ದಾರೆ. ದುರ್ಬಳಕೆ ಮಾಡಿದ ಅನುದಾನ ರೂ. 5 ಲಕ್ಷ ಮತ್ತು ರೂ. 36.25 ಲಕ್ಷವನ್ನು ಯಾವ ದಿನಾಂಕದಿಂದ ಪಡೆದಿದ್ದಾರೆಯೋ ಆ ದಿನದಿಂದ ಬಡ್ಡಿ ಸೇರಿಸಿ ವಸೂಲು ಮಾಡಲು ಕ್ರಮಕೈಗೊಳ್ಳಬೇಕು ಮತ್ತು ಘೋಟ್ನೆಕರ್ ಹಾಗೂ ರಾಯಣ್ಣ ಅರಶಿಣಗೇರಿ ವಿರುದ್ಧ ಐಪಿಸಿ ಸೆಕ್ಷನ್ 13 (1) (ಎ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮಕೈಗೊಳ್ಳಬೇಕು. ಘೋಟ್ನೆಕರ್ ಅವರು ಪ್ರತಿನಿಧಿಸುವ ಯಾವುದೇ ಸಂಘ ಹಾಗೂ ಶಿವಾಜಿ ಎಜುಕೇಶನ್ ಟ್ರಸ್ಟ್ಗೆ ಸರ್ಕಾರದ ಅನುದಾನ ನೀಡದಿರಲು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರು ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಮರಾಠ ಸಮಾಜದ ಮುಖಂಡ ಬಿ.ಡಿ ಚೌಗಲೆ ಮಾತನಾಡಿ, ಅಭಿವೃದ್ಧಿಯ ಆಸೆ ಹೊತ್ತು ಘೋಟ್ನೇಕರ್ಗೆ ಸಮಾಜದ ಅಧ್ಯಕ್ಷರನ್ನಾಗಿಸಿದ್ದೆವು. ಎಮ್ಎಲ್ಸಿಯಾಗಿ ಆರಿಸಿ ತರುವಾಗಲೂ ಸಮಾಜ ಮುಂದೆ ನಿಂತಿತ್ತು. ಆದರೆ ತಾನು ಸ್ವಾರ್ಥ ಜೀವಿ ಎಂಬುದನ್ನು ಕ್ಷೇತ್ರಕ್ಕೇ ತೋರಿಸಿಕೊಟ್ಟಿದ್ದಾನೆ. ಸರ್ಕಾರಕ್ಕೇ ಮೊಸ ಮಾಡಿದಂತಹ ಎಮ್ಎಲ್ಸಿ, ಕೆಡಿಸಿಸಿ ಬಾಂಕ್ ಅಧ್ಯಕ್ಷನಾಗಿದ್ದಾಗ ಟ್ಯಾಕ್ಟರ್ ಎಜೆನ್ಸಿ ಪಡೆದು ಹಲವಾರು ಬಡವರ ಜೀವ ಹಿಂಡಿದ್ದಾನೆ. ದುರುಪಯೋಗ ಪಡಿಸಿದ ಹಣ ಮಗನ ಅಕೌಂಟ್ಗೆ ಜಮಾ ಆದ ಬಗ್ಗೆ ನಮಗೆ ತಿಳಿದಿದೆ ಎಂದ ಅವರು ಜಗತ್ತಿನಲ್ಲಿ ಬಾಳಲು ಘೋಟ್ನೇಕರ್ ಯೋಗ್ಯನಲ್ಲ ಎಂದು ಏಕವಚನದಲ್ಲೇ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ್, ತಾ.ಪಂ ಮಾಜಿ ಅಧ್ಯಕ್ಷ ದೇಮಾಜಿ ಶಿರೋಜಿ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಪಾತ್ರಿ, ಬಾಬು ತೊರ್ಲೇಕರ್, ಮುರಾರಿ, ತುಕಾರಾಮ ಪಟ್ಟೆಕರ್ ಹಿಂದುಳಿದ ವರ್ಗಗಳ ಮುಖಂಡ ಶಿವಾಜಿ ನರ್ಸಾನಿ, ಚೂಡಪ್ಪ ಬೊಬಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.