ಕಾರವಾರ : ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ ನೋಂದಾಯಿತ ಅಕ್ಕಿ ಗಿರಣಿ ಮಾಲೀಕರು ಕೂಡಲೇ ಖರೀದಿ ಏಜೆನ್ಸಿಯಾದ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ದೊಂದಿಗೆ ಬ್ಯಾಂಕ್ ಗ್ಯಾರಂಟಿ ಅಥವಾ ಅಡಮಾನ ಪತ್ರದ ಮೂಲಕ ಕರಾರು ಒಪ್ಪಂದ ಪತ್ರ ಮಾಡಿಕೊಂಡು ನಿಗದಿತ ಗುಣಮಟ್ಟದ ಭತ್ತ ಸಂಗ್ರಹಿಸುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಕ್ಕಿ ಗಿರಣಿ ಮಾಲೀಕರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಅಕ್ಕಿ ಗಿರಣಿ ಮಾಲೀಕರೊಂದಿಗೆ ಎಂಎಸ್ಪಿ ಯೋಜನೆಯಡಿ ಸಂಗ್ರಹಣೆಯಾದ ಭತ್ತದ ಹಲ್ಲಿಂಗ್ ಕುರಿತಂತೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ಕಿ ಗಿರಣಿ ಮಾಲೀಕರು ತಮ್ಮ ಸಮಸ್ಯೆಗಳನ್ನು ವಿವರಿಸುತ್ತಾ, ಕೃಷಿ ಇಲಾಖೆಯ ಗ್ರೇಡರ್ಗಳು ಭತ್ತದ ಗುಣಮಟ್ಟವನ್ನು ಸರಿಯಾಗಿ ಪರೀಕ್ಷಿಸುವಂತೆ ಆಗಬೇಕು. ಹಿಂದಿನ ಸಾಲಿನಲ್ಲಿ ಇಂಡೆಮ್ನಿಟಿ ಬಾಂಡ್ ಆಧಾರದಲ್ಲಿ ಭತ್ತ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಆದರೆ ಈ ಸಾಲಿನಲ್ಲಿ ಅಡಮಾನ ಪತ್ರ ಮಾಡಿಕೊಳ್ಳುವಂತೆ ಸೂಚಿಸಿರುವುದರಿಂದ ಬ್ಯಾಂಕ್ ಗ್ಯಾರಂಟಿ ಮಾಡಿಕೊಳ್ಳಲು ತಾವು ಈಗಾಗಲೇ ಆಸ್ತಿಯ ಮೇಲೆ ಸಾಲ ಹೊಂದಿರುವುದರಿಂದ ಕಷ್ಟವಾಗುತ್ತದೆ ಎಂದರು.
ಅಡಮಾನ ಪತ್ರ ಮಾಡಿಕೊಳ್ಳಲು ಮುದ್ರಾಂಕ ಶುಲ್ಕ 0.5% ಇದ್ದು ಇದು ತಮಗೆ ಆರ್ಥಿಕ ಹೊರೆಯಾಗುವುದರಿಂದ ಈ ಶುಲ್ಕದಿಂದ ವಿನಾಯತಿ ನೀಡುವಂತೆ ಕೋರಿದರು ಅಲ್ಲದೇ ಕಳೆದ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಂಗ್ರಹಿಸಿದ ಭತ್ತವನ್ನು ಮಿಲ್ಲಿಂಗ್ ಮಾಡಿದ ಕುರಿತು ಬರಬೇಕಾದ ಹಣ ಇದುವರೆಗೂ ಸಂದಾಯವಾಗದೇ ಇರುವುದರಿಂದ ಸಾಧ್ಯವಾದಷ್ಟು ಬೇಗ ಸಂದಾಯ ಮಾಡಿಸಿ ಕೊಡಲು ವಿನಂತಿಸಿದರು.
ಅಕ್ಕಿ ಗಿರಣಿ ಮಾಲೀಕರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಕೃಷಿ ಇಲಾಖೆಯಿಂದ ನೇಮಕಗೊಂಡ ಗ್ರೇಡರ್ರವರು ರೈತರ ಭತ್ತವನ್ನು ಸರಿಯಾಗಿ ಪರಿಶೀಲಿಸಿ ದೃಢೀಕರಿಸಿದ ಬಗ್ಗೆ ಖಚಿತಪಡಿಸಿಕೊಳ್ಳಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು ಹಾಗೂ ಅಕ್ಕಿ ಗಿರಣಿ ಮಾಲೀಕರು ಉತ್ತಮ ಗುಣಮಟ್ಟದ ಭತ್ತವನ್ನು ಮಾತ್ರ ರೈತರಿಂದ ಪಡೆಯುವಂತೆ ಹೇಳಿದರು. ಸಬ್ ರೆಜಿಸ್ಟ್ರಾರ್ ಕಚೇರಿಯಿಂದ ಅಡಮಾನ ಪತ್ರ ಪಡೆಯಲು ಇರುವ 0.5% ಮುದ್ರಾಂಕ ಶುಲ್ಕದಿಂದ ವಿನಾಯತಿ ನೀಡಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಆಹಾರ & ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಇವರಿಗೆ ಸೂಚಿಸಿದರು. ಹಿಂದಿನ ಸಾಲಿನ ಮಿಲ್ಲಿಂಗ್ ಮಾಡಿದ ಹಣ ಬಿಡುಗಡೆ ಕುರಿತು ಆದೇಶ ಬಂದಿದ್ದು ಹಣ ಬಿಡುಗಡೆಯಾದ ತಕ್ಷಣ ನೀಡುವುದಾಗಿ ಅಕ್ಕಿ ಗಿರಣಿ ಮಾಲೀಕರಿಗೆ ತಿಳಿಸಿದರು. ಎಲ್ಲಾ ಅಕ್ಕಿ ಗಿರಣಿ ಮಾಲೀಕರು ವಿಳಂಬಕ್ಕೆ ಆಸ್ಪದ ನೀಡದೆ ರೈತರಿಂದ ಭತ್ತ ಪಡೆದು ಸಂಗ್ರಹಿಸಿ ಹಲ್ಲಿಂಗ್ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ 2021-22 ನೇ ಸಾಲಿನ ಬೆಂಬಲ ಬೆಲೆ ಯೋಜನೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ ಸೇರಿದಂತೆ ಇತರರು ಇದ್ದರು.