ಶಿರಸಿ: ರಾಜ್ಯಾದ್ಯಂತ ಕೊವಿಡ್ ನಿಂದಾಗಿ ಜನ ಸಾಮಾನ್ಯರ ಹಾಗು ಇತರ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಏರುಪೇರಾಗಿದ್ದರೂ, ಅಡಿಕೆಯ ಬೆಲೆ, ಬೆಳೆಗಾರರನ್ನು ಒಂದು ಹಂತಕ್ಕೆ ತುಸು ನೆಮ್ಮದಿಯಿಂದ ಇರುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಪೂರಕವೆಂಬಂತೆ ಜಿಲ್ಲೆಯ ಸಹಕಾರಿ ವ್ಯವಸ್ಥೆಗಳು ಹಾಗು ಸಂಘಗಳು ಈ ನಿಟ್ಟಿನಲ್ಲಿ ತಮ್ಮ ಸದಸ್ಯರ ಹಿತ ಕಾಯುವಲ್ಲಿ ಪ್ರಬಲವಾಗಿ ನಿಂತಿವೆ.
ಇಷ್ಟು ವರ್ಷಗಳ ಕಾಲ ಕೇವಲ ಕೆಂಪಡಿಕೆ ಹಾಗು ಚಾಲಿ ಅಡಿಕೆಯ ಖರೀದಿಗೆ ಮುಂದಾಗಿದ್ದ ಸಹಕಾರಿ ಸಂಸ್ಥೆಗಳು, ಕಳೆದ ಬಾರಿಯಿಂದ ಹಸಿ ಅಡಿಕೆ ಟೆಂಡರ್ ಮೂಲಕ ಸಹಕಾರಿ ವ್ಯವಸ್ಥೆಯಲ್ಲಿ ಮತ್ತು ಬೆಳೆಗಾರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಬಲಪಡಿಸುತ್ತಿವೆ.
ಶಿರಸಿಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಟಿ.ಎಂ.ಎಸ್.ನಲ್ಲಿ ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆ ಕಳೆದ ಎರಡೂವರೇ ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಕಳೆದ ಬಾರಿಗಿಂತಲೂ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬರುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಸಾಲಿನಲ್ಲಿ ಈ ವರೆಗೆ 16,740 ಕ್ವಿಂಟಲ್ ಗಳಷ್ಟು ಹಸಿ ಅಡಿಕೆ ವಿಕ್ರಿಯಾಗಿದ್ದು, ಅಂದಾಜು 11.02 ಕೋಟಿ ಮೌಲ್ಯದ ಅಡಿಕೆ ವ್ಯವಹಾರ ನಡೆದಿದೆ. ಕಳೆದ ವರ್ಷ ಅಂದಾಜು ₹ 6.26 ಕೋಟಿ ಮೌಲ್ಯದ 12,183 ಕ್ವಿಂಟಲ್ ಅಡಿಕೆ ಮಾತ್ರ ವಿಕ್ರಿಯಾಗಿತ್ತು. ಇನ್ನೂ ಒಂದು ತಿಂಗಳು ಕಾಲ ಈ ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಟಿ.ಎಂ.ಎಸ್.ನಿಂದಲೇ ಹಸಿ ಅಡಿಕೆ ನೇರ ಖರೀದಿ:
ಪ್ರಸ್ತುತ ಸಾಲಿನಲ್ಲಿ ಟಿ.ಎಂ.ಎಸ್.ನಿಂದಲೇ ಹಸಿ ಅಡಿಕೆ ನೇರ ಖರೀದಿ ಮತ್ತು ಪ್ರೊಸೆಸ್ ಆರಂಭಗೊಂಡಿದ್ದು, ಸಂಘದ ಬನವಾಸಿ ಶಾಖೆಯಲ್ಲಿ ಇದರ ಪೂರ್ಣ ಕಾರ್ಯವಿಧಾನಗಳು ನಡೆಯುತ್ತಿವೆ. ಆ ಮೂಲಕ ನಮ್ಮಲ್ಲಿಯ ಗುಣಮಟ್ಟದ ಅಡಿಕೆಗಳು ನಮ್ಮಲ್ಲಿಯೇ ಉಳಿಯುತ್ತದೆ ಮತ್ತು ನಮ್ಮ ಸಂಘದ ರೈತರಿಗೆ ಹೆಚ್ಚಿನ ಅನುಕೂಲ ದೊರೆಯುತ್ತಿದೆ. ಜನರೂ ಸಹ ಸಂಘದ ಕೆಲಸಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಪ್ರಸ್ತುತ ಸಂಘದಿಂದಲೇ ಸುಮಾರು ₹ 1.69 ಕೋಟಿ ಮೌಲ್ಯದ 2,241 ಕ್ವಿಂಟಲ್ ಗಳಷ್ಟು ಹಸಿ ಅಡಿಕೆ ಖರೀದಿಸಿದ್ದು, ಅವುಗಳನ್ನು ಸಂಘದಿಂದಲೇ ಉತ್ತಮ ವ್ಯವಸ್ಥೆಯಲ್ಲಿ ಪ್ರೊಸೆಸ್ ಮಾಡಲಾಗುತ್ತಿದೆ ಎನ್ನುತ್ತಾರೆ ಸಂಘದ ಮುಖ್ಯಕಾರ್ಯನಿರ್ವಾಹಕ ಎಮ್.ಎ. ಹೆಗಡೆ ಕಾನಮುಸ್ಕಿ.
ಕೂಲಿ ಕಾರ್ಮಿಕರ ಸಮಸ್ಯೆ, ಅಡಿಕೆ ಮೇಲಿನ ನಿಷೇಧದ ತೂಗುಗತ್ತಿ ಮತ್ತಿತರ ಸಮಸ್ಯೆಗಳ ಮಧ್ಯ ಇರುವ ಅಡಿಕೆ ಬೆಳೆಗಾರರಿಗೆ ಸಹಕಾರಿ ವ್ಯವಸ್ಥೆಯು ಸಂಜೀವಿನಿಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.