
ಶಿರಸಿ: ಆಧುನಿಕತೆಯ ಗುಂಗೇರಿಸಿಕೊಂಡು ಉದ್ಯೋಗವನ್ನರಸಿ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಯುವಪೀಳಿಗೆಯ ನಡುವೆ ಇಲ್ಲೊಂದು ಉತ್ಸಾಹಿ ಯುವಕರ ತಂಡ ತನ್ನ ಪರಿಸರ ಪ್ರೇಮಿ ಕಾರ್ಯದ ಮೂಲಕ ಸಮಾಜಕ್ಕೆ ಹಾಗೂ ಇಡೀ ಯುವಪೀಳಿಗೆಗೆ ಮಾದರಿಯಾಗಿದೆ.
“ಹಸಿರಿದ್ದರೆ ಉಸಿರು” ಎಂಬ ಪ್ರೇರಣೆಯಿಟ್ಟುಕೊಂಡು ಸಮಾನ ಮನಸ್ಸುಳ್ಳ ಯುವಕರು ಸೇರಿಕೊಂಡು “ಹ(ಉ)ಸಿರು” ಎಂಬ ತಂಡಕಟ್ಟುಕೊಂಡು ಗಿಡನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕೊರೊನಾ ಮಹಾಮಾರಿಗೆ ಇಡೀ ಜಗತ್ತೆ ಸ್ತಭ್ದವಾಗಿದ್ದರೂ ಖಾಲಿ ಕುಳಿತುಕೊಳ್ಳದೇ ಸಮಾಜಕ್ಕೆ ಹಾಗೂ ಮನುಕುಲದ ಮುಂದಿನ ಪೀಳಿಗೆಗೆ ಒಳಿತಾಗಲೆಂಬ ಚಿಂತನೆಯೊಂದಿಗೆ ಪರಿಸರದ ರಕ್ಷಣೆ ಹಾಗೂ ಅಭಿವೃದ್ಧಿಗೋಸ್ಕರ ಪಣ ತೊಟ್ಟು ಕಾರ್ಯನಿರತವಾಗಿದೆ ಈ ತಂಡ.
” ಮಾನವ ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾನೆ. ಆದರೆ ಹಿಂತಿರುಗಿಸುತ್ತಿಲ್ಲ. ಸುತ್ತಲೂ ಹಸಿರಿದ್ದರೆ ನೆಮ್ಮದಿಯ ಉಸಿರು ಎಂಬುದು ಸಾರ್ವಕಾಲಿಕ ಸತ್ಯ. ನೆಮ್ಮದಿಯ ಜೀವನ ನಡೆಸಲು ಕೇವಲ ಉದ್ಯೋಗ ಹಣವೊಂದೇ ಮುಖ್ಯವಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗಗಳಾದ ಗಿಡಮರಗಳು ಹಾಗೂ ಪರಿಸರ ಸ್ವಚ್ಛಂದವಾಗಿರಬೇಕು. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹಾಗೂ ನಾವು ನಮ್ಮ ಮುಂದಿನ ಪೀಳಿಗೆಗೆ ಕಾಪಿಡಬೇಕಾದ ಪರಿಸರವನ್ನು ರಕ್ಷಿಸಬೇಕಾದ ಹೊಣೆ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲ ಸೇರಿಕೊಂಡು ಕಾರ್ಯನಿರತರಾಗಿದ್ದೇವೆ” ಎನ್ನುತ್ತದೆ ‘ಹ(ಉ)ಸಿರು ತಂಡ.
ಈ ಹಿನ್ನೆಲೆಯಲ್ಲಿ ಜೂ.27 ರಂದು ಗುರುವಳ್ಳಿ ಗ್ರಾಮದ ಗೋಪಿನಮರಿಯಲ್ಲಿ 500ಕ್ಕೂ ಹೆಚ್ಚು ಗಿಡಗಳ್ಳನ್ನು ನೆಡುವ ಮೂಲಕ ಎರಡನೇ ವರ್ಷದ ವನಮಹೋತ್ಸವವನ್ನು ತಂಡ ಆಚರಿಸಿದೆ.
ಮಾತುಮಾತಿನಲ್ಲಿ ಹುಟ್ಟಿಕೊಂಡ ಚಿಂತನೆ ಕಾರ್ಯರೂಪ ಪಡೆದು ತಂಡವಾಗಿ ಚಟುವಟಿಕೆಗಳು ನಡೆದು ಸುತ್ತಲಿನ ಊರಿನವರಿಗೂ ಪ್ರೇರಣೆ ನೀಡಿ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕಾರ್ಯವನ್ನು ನೋಡಿ ಸುತ್ತಲಿನ ಗೋಣ್ಸರ, ಮುರೇಗಾರ್ ಊರಿನಲ್ಲೂ ತಂಡಗಳು ಹುಟ್ಟಿಕೊಂಡು ಪರಿಸರ ಸ್ನೇಹಿ ಕಾರ್ಯಗಳು ಹೆಚ್ಚುತ್ತಿರುವುದು ತಂಡ ಕಾರ್ಯಕ್ಕೆ ಹಿಡಿದ ಕೈಗನ್ನಡಿ.
ಲಾಕ್ ಡೌನ್ ಸಂದರ್ಭದಲ್ಲಿ ಮನೆಗೆ ಹಿಂತಿರುಗಿದ ಇಂಜಿನಿಯರ್ಸ್, ಫಾರ್ಮಾಸಿಸ್ಟ್, ಎಮ್ಮೆಸ್ಸಿ, ಎಂಬಿಎ, ಬಿಎಸ್ಸಸಿ , ಬಿಕಾಮ್, ಬಿವಿಎಸ್ಸಿ , ಸಿಎ, ಸಿಎಸ್, ಇತ್ಯಾದಿ ಉದ್ಯೋಗಿ ಹಾಗೂ ವಿದ್ಯಾರ್ಥಿಗಳು ತಂಡದಲ್ಲಿದ್ದಾರೆ. ಊರಿನ ಅನುಭವಿ ಕೃಷಿಕರು ಮಾರ್ಗದರ್ಶಕರಾಗಿದ್ದಾರೆ.
ಅಲ್ಲದೇ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರ ಮಾರ್ಗದರ್ಶನದಿಂದ ಇಂತಹ ಕಾರ್ಯ ನಮ್ಮಿಂದ ಸಾಧ್ಯವಾಗಿದೆ ಎನ್ನುತ್ತಾರೆ.
ನಮ್ಮ ಈ ಚಿಕ್ಕ ಪ್ರಯತ್ನ ಮುಂದೆ ಸಮಾಜದಲ್ಲಿ ಕ್ರಾಂತಿಯಾಗಿ ಮಲೆನಾಡು ಮತ್ತೆ ಪುನಃ ಹಸಿರ ಶಾಲು ಹೊದ್ದು ಕಂಗೊಳಿಸುವಂತಾಗಲಿ. ಪರಿಸರದ ಕುರಿತು ಕಾಳಜಿ ಪ್ರೀತಿ ಪ್ರತಿಯೊಬ್ಬರಲ್ಲೂ ಬರುವಂತಾಗಲಿ. ಪ್ರಕೃತಿದೇವೋಭವ ಎಂಬುದು ತಂಡದ ಆಶಯ.
ಇಂತಹ ತಂಡಗಳು ಹೆಚ್ಚೆಚ್ಚು ಹುಟ್ಟಿಕೊಂಡು ಪರಿಸರಕ್ಕೆ ಸಮಾಜಕ್ಕೆ ಒಳಿತಾಗಲಿ ಎಂಬುದು ಎಲ್ಲರ ಆಶಯ.