ಹೊನ್ನಾವರ :ಪಟ್ಟಣದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಹಿರಿಯ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಅಗಲುವಿಕೆಗೆ ಸಂತಾಪ ಸೂಚಿಸಿ ಸೋಮವಾರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಕನ್ನಡಪರವಾದ ಸಂಘಟನೆ, ಹೋರಾಟ ಮತ್ತು ತಮ್ಮ ಮೊನಚುಮಾತು, ಬರವಣಿಗೆಯಿಂದ ಖ್ಯಾತರಾಗಿದ್ದ ಚಂಪಾ ಅವರ ಅಗಲುವಿಕೆ ರಾಜ್ಯದ ಕನ್ನಡಿಗರಿಗೆ ದೊಡ್ಡ ನಷ್ಟವೇ ಸರಿ. ವಿದ್ಯಾರ್ಥಿಗಳು ಅವರ ಬರಹವನ್ನು ಓದುವ ಮೂಲಕ ಅವರ ನಿಲುವನ್ನು ತಲುಪಬೇಕಾಗಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಅಪಗಾಲ ಮಾತನಾಡುತ್ತ ಚಂಪಾ ಬದುಕಿನ ಅಂತ್ಯದವರೆಗೂ ವ್ಯಕ್ತಿ ಆರಾದಕರಾಗದೇ ಜ್ಞಾನಪೀಠ ಪುರಸ್ಕøತ ರನ್ನು, ಮಂತ್ರಿಗಳನ್ನು ಯಾವ ಮುಲಾಜಿಗೆ ಬೀಳದೇ ಕುಟುಕಿದವರು.
ಸಂಕ್ರಮಣದಂತಹ ಸಾಹಿತ್ಯ ಪತ್ರಿಕೆಯನ್ನು ಎದೆಗೆ ಹಚ್ಚಿಕೊಂಡು ದೀರ್ಘಕಾಲ ಮುನ್ನಡೆಸಿದ ಛಲವಾದಿ ಎಂಬುದಾಗಿ ಪಾಟೀಲರ ವ್ಯಕ್ತಿತ್ವ ಮತ್ತು ಬರವಣಿಗೆಯ ಹೊಳಹುಗಳನ್ನು ಹೇಳಿದರು.
ಇಂಗ್ಲಿಷ್ ಮುಖ್ಯಸ್ಥರಾದ ಎಂ. ಜಿ. ಹೆಗಡೆ ತಾನು ಅವರ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ಹಂಚಿಕೊಂಡರು. ಏಕಕಾಲಕ್ಕೆ ಇಂಗ್ಲಿಷ್ ಮತ್ತುಕನ್ನಡ ಭಾಷೆಯ ಮೇಲೆ ಗಟ್ಟಿಯಾದ ಹಿಡಿತ ಸಾಧಿಸಿದ್ದ ಚಂಪಾ ಇವೆರಡೂ ಭಾಷೆಯ ಸೇತುವಾಗಿದ್ದರು. ಬದುಕಿನ ಕೊನೆಯವರೆಗೂ ಕನ್ನಡವನ್ನು ಉಸಿರಾಡಿದ ಹೋರಾಟದಲ್ಲಿ ಸಕ್ರಿಯವಾಗಿದ್ದ ಜೀವವೊಂದು ಕಣ್ಮರೆಯಾಗಿದೆ. ಅವರನ್ನು ನಮ್ಮೊಳಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸಭೆಗೂ ಪೂರ್ವದಲ್ಲಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಸಂಜೀವ ನಾಯ್ಕ ಸೇರಿದಂತೆ ಬೋಧಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.