ಕಾರವಾರ: ಆಯುಧ ಅನುಜ್ಞಪ್ತಿಗಳನ್ನು ಹೊಂದಿ, ಡಿ.31 ಕ್ಕೆ ನವೀಕರಣ ಅವಧಿ ಮುಕ್ತಾಯಗೊಂಡಿರುವ ಬೆಳೆ, ಸ್ವರಕ್ಷಣೆ ಆಯುಧ ಅನುಜ್ಞಪ್ತಿದಾರರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅನುಜ್ಞಪ್ತಿಗಳನ್ನು ನವೀಕರಿಸಲು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ನಮೂನೆ ಅ-3ಯಲ್ಲಿ ಅರ್ಜಿ, ತಹಶೀಲ್ದಾರ ಕಛೇರಿಯಲ್ಲಿ ಪಡೆದು, ಮೂಲ ಆಯುಧ ಅನುಜ್ಞಪ್ತಿ, ಎಸ್ 3 ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ, ಎಸ್-4 ನಮೂನೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದ ನಿರಾಕ್ಷೇಪಣಾ ಪತ್ರ, ರೂ. 1500/-ನ್ನು ಕೆ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ ಲೆಕ್ಕ ಶೀರ್ಷಿಕೆ 005500104000000ನೇ ದಕ್ಕೆ ಭರಣಾ ಮಾಡಿ ಮೂಲ ಚಲನ್ ದಾಖಲೆಯೊಂದಿಗೆ ಸಲ್ಲಿಸುವುದು.
ಅನುಜ್ಞಪ್ತಿದಾರರು ಮೃತಪಟ್ಟಿರುವುದರಿಂದ, ವಯಸ್ಸಾಗಿರುವುದರಿಂದ, ಅನಾರೋಗ್ಯದಕಾರಣದಿಂದ, ಬಂದೂಕಿನ ಅವಶ್ಯಕತೆ ಇಲ್ಲದಿರುವುದರಿಂದ ಅಥವಾ ಯಾವುದೇ ಕಾರಣಗಳಿಂದ ಆಯುಧ ಅನುಜ್ಞಪ್ತಿಗಳನ್ನು ರದ್ದುಪಡಿಸಲು ಇಚ್ಚಿಸಿದಲ್ಲಿಯೂ ಸಹ ಅನುಜ್ಞಪ್ತಿದಾರರು ಅಥವಾ ಅವರ ಅವಲಂಬಿತರಿಂದ ಅನುಜ್ಞಪ್ತಿ ರದ್ದು ಪಡಿಸುವ ಬಗ್ಗೆ ಲಿಖಿತ ಅರ್ಜಿ, ಮೂಲ ಆಯುಧ ಅನುಜ್ಞಪ್ತಿ (ಅನುಜ್ಞಪ್ತಿ ಕಳೆದು ಹೋಗಿದ್ದಲ್ಲಿ ಠಾಣೆಗೆ ದೂರು ದಾಖಲಿಸಿದ ಸ್ವೀಕೃತಿ ಪ್ರತಿ ಹಾಗೂ ಅನುಜ್ಞಪ್ತಿ ಸಿಗದ ಹಿಂಬರಹದೊಂದಿಗೆ ಅರ್ಜಿ), ಅನುಜ್ಞಪ್ತಿದಾರ ಮೃತಪಟ್ಟಲ್ಲಿ ಮರಣ ದಾಖಲೆ ಪ್ರಮಾಣ ಪತ್ರವನ್ನು ಲಗತ್ತಿಸಿ ಅನುಜ್ಞಪ್ತಿಗಳನ್ನು ರದ್ದುಪಡಿಸಿಕೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.