ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಿನಿ ವಿಧಾನ ಸೌಧ ಕಾಂಪೌಂಡ್ ಗೆ ಹೊಂದಿಕೊಂಡು ಬೆಳೆದಿರುವ ಗಿಡಗಂಟಿಗಳಿಂದಾಗಿ ಅದರ ಸೌಂದರ್ಯವೇ ಕಳೆಗುಂದಿದೆ.
ಮಿನಿ ವಿಧಾನ ಸೌಧಕ್ಕೆ ಪತ್ರ ವ್ಯವಹಾರಕ್ಕೆ ಪ್ರತಿದಿನ ಒಂದಿಲ್ಲೊಂದು ಮನವಿ, ವ್ಯಾಜ್ಯ ಸಂಬಂಧಿಸಿದ ಕೆಲಸಗಳಿಗಾಗಿ ಜನರು ತಾಲೂಕಿನ ವಿವಿಧೆಡೆಯಿಂದ ಆಗಮಿಸುತ್ತಾರೆ. ಅದಲ್ಲದೇ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಗಳಂತಹ ಮೇಲಾಧಿಕಾರಿಗಳ ಭೇಟಿಯು ಆಗಾಗ್ಗ ಇರುತ್ತದೆ.
ರಸ್ತೆಯಂಚಿನಲ್ಲಿ ಬೆಳೆದಿರುವ ಗಿಡಗಳ ರಾಶಿಯಲ್ಲಿ ಒಂದಿಷ್ಟು ಪ್ಲಾಸ್ಟಿಕ್ ಕೂಡ ಸೇರಿಕೊಂಡು ಜಾನುವಾರುಗಳು ಆಹಾರಕ್ಕೆಂದು ಆ ಸ್ಥಳದಲ್ಲಿ ನಿಂತಿರುತ್ತವೆ. ಅವುಗಳು ಒಮ್ಮೆಲೆ ರಸ್ತೆಗೆ ನುಗ್ಗುವದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಕ್ಕೆ ಸಿಲುಕಿ ಅಪಘಾತವಾಗುವ ಸಂಭವವು ಇರುತ್ತದೆ. ಜಾನುವಾರು ಜೀವ ಹಾನಿಯಾಗುವ ಜೊತೆಗೆ, ಜನರ ಜೀವಕ್ಕು ಕುತ್ತು ಬರುತ್ತದೆ . ಅನೇಕ ಘಟನೆಗಳು ಇಂತಹ ಕಾರಣಗಳಿಂದ ಇಲ್ಲಿಯು ಸೇರಿದಂತೆ ಇತರೆಡೆಗಳಲ್ಲಿ ನಡೆಯುತ್ತಿದೆ.
ಇಲ್ಲಿ ಬೆಳೆದು ನಿಂತಿರುವ ಹಿಂಡುಗಳಲ್ಲಿ ಹಾವು, ಚೇಳಿನಂತ ವಿಷಪೂರಿತ ಜೀವಿಗಳು ಸೇರಿಕೊಂಡರೆ ಕಚೇರಿಗೆ ಬರುವವರ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.ಅಷ್ಟೇ ಅಲ್ಲದೆ ತಹಶೀಲ್ದಾರ ಕಚೇರಿಗೆ ಇದ್ದ ಹಳೆ ಕಂಪೌಂಡ ಗೋಡೆಯ ಕೆಲವು ಭಾಗಗಳು ತೆಗೆಯದೆ ಹಾಗೇ ಬಿಟ್ಟಿದ್ದು ಮಿನಿ ವಿಧಾನ ಸೌಧದ ಅಂದಗೆಡಿಸಿದೆ.
ವರದಿಯಿಂದ ಎಚ್ಚೆತ್ತಾದರು ಸಂಬಂಧಪಟ್ಟ ಇಲಾಖೆ ಇಲ್ಲಿ ಅನವಶ್ಯಕವಾಗಿ ಬೆಳೆದು ನಿಂತಿರುವ ಗಿಡ, ಗಂಟಿಗಳನ್ನು ಸ್ವಚ್ಚತೆ ಮಾಡಬೇಕಿದೆ. ಈ ಮೂಲಕ ಮಿನಿವಿಧಾನ ಸೌಧದ ಸೌಂದರ್ಯಕ್ಕೆ ಮೆರಗು ನೀಡಬೇಕಿದೆ.