ಕಾರವಾರ: ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವೀಕೆಂಡ್ ಕರ್ಫ್ಯೂಗೆ ಭಾನುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸಂಚಾರ, ಜನದಟ್ಟಣೆಯಿಲ್ಲದೇ ನಗರದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.
ವಾರಾಂತ್ಯದ ಕರ್ಫ್ಯೂ ಪ್ರಥಮ ದಿನವಾದ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರದ ಕರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆತಿದೆ. ನಗರದಲ್ಲಿ ಅಗತ್ಯ ಜೀವನಾವಶ್ಯಕ ವಸ್ತುಗಳಾದ ಹಾಲು, ಹಣ್ಣು, ತಕಾರಿ ಹಾಗೂ ದಿನಸಿ ಅಂಗಡಿ ಮುಂಗಟ್ಟುಗಳು ತೆರೆದಿತ್ತಾದರೂ, ಗ್ರಾಹರಿಲ್ಲದೇ ಬಣಗುಡುತ್ತಿದ್ದವು. ನಗರದ ವಿವಿಧ ಸ್ಥಳಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಮಾಸ್ಕ್ ಧರಿಸದೇ ಸಂಚರಿಸುವವರಿಗೆ ಹಾಗೂ ಅನಾವಶ್ಯಕ ಸುತ್ತಾಡುವವರಿಗೆ ದಂಡದ ಬಿಸಿ ಮುಟ್ಟಿಸಿದರು.
ಕಾರವಾರ ಬಸ್ ನಿಲ್ದಾಣದಿಂದ ಬೇರೆಬೇರೆ ತಾಲೂಕು ಹಾಗೂ ಜಿಲ್ಲೆಗಳಿಗೆ ಕೆಲವೇ ಕೆಲವು ಬಸ್‌ಗಳು ಸಂಚರಿಸಿದ್ದವು. ಇನ್ನು, ಗ್ರಾಮೀಣ ಪ್ರದೇಶಗಳಿಗೂ ಸಹ ಪ್ರಯಾಣಿಕರಿಗೆ ತಕ್ಕಂತೆ ಗ್ರಾಮಕ್ಕೊಂದರಂತೆ ಬಸ್ ಸಂಚರಿಸಿವೆ. ಉಳಿದ ಬಸ್‌ಗಳೆಲ್ಲವೂ ಕಾರವಾರ ಘಟಕದಲ್ಲಿ ಸಾಲಾಗಿ ತಂಗಿದ್ದವು. ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿರದ ಕಾರಣ ಕೆಲವು ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ಇನ್ನು ಆಟೋ, ಟ್ಯಾಕ್ಸಿಗಳು ಸ್ಟ್ಯಾಂಡ್‌ಗಳಲ್ಲಿ ತಂಗಿತ್ತಾದರೂ ಪ್ರಯಾಣಿಕರಿಲ್ಲದೇ, ಚಾಲಕರು ಖಾಲಿ ಕುಳಿತುಕೊಳ್ಳುವಂತಾಗಿತ್ತು. ಉಳಿದಂತೆ ಆರೋಗ್ಯ ಸೇವೆ, ಮೆಡಿಕಲ್ ಸೇರಿದಂತೆ ತುರ್ತು ವಾಹನಗಳು ಸಂಚರಿಸಿದ್ದವು.
ಒಟ್ಟಾರೆ ಕೊರೊನಾ ಹಾಗೂ ರೂಪಾಂತರಿ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಜಾರಿಗೊಳಿಸಿದ್ದ ವಾರಾಂತ್ಯದ ಕರ್ಫ್ಯೂಗೆ ತಾಲೂಕಿನಾದ್ಯಂತ ಸಾರ್ವಜನಿಕರು ಉತ್ತಮ ಬೆಂಬಲ ಸೂಚಿಸಿದ್ದಾರೆ.
ದಿನನಿತ್ಯದ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸುವ ಬಡ ವ್ಯಾಪಾರಸ್ಥರರಿಗೆ ವಾರಾಂತ್ಯದ ಕರ್ಫ್ಯೂವಿನಿಂದ ಗ್ರಾಹರಿಲ್ಲದೇ ಸಾಕಷ್ಟು ಆರ್ಥಿಕ ತೊಂದರೆ ಅನುಭವಿಸುವಂತಾಗಿದ್ದು, ಕೊರೊನಾ ತಡೆಗೆ ವಾರಾಂತ್ಯದ ಕರ್ಫ್ಯೂ ಪರಿಹಾರವಲ್ಲ.
– ನಾರಾಯಣ ಗೌಡ (ಎಳನೀರು ವ್ಯಾಪಾರಿ)
ಕಳೆದೆರಡು ಲಾಕ್‌ಡೌನ್‌ನಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದೇವೆ ಎನ್ನುವಷ್ಟರಲ್ಲಿ ಕರ್ಫ್ಯೂ, ಲಾಕ್‌ಡೌನ್‌ಗೆ ಮುಂದಡಿ ಇಡಲಾಗಿದೆ. ಹೊತ್ತಿನ ಊಟಕ್ಕೂ ಕೆಲವರು ಹರಸಾಹಸ ಪಡುತ್ತಿದ್ದಾರೆ. ರಾಜಕೀಯ ಆಟಕ್ಕೆ ಬಡ ಜನತೆ ಬಲಿಪಶು ಆಗುತ್ತಿರುವುದು ವಿಪರ್ಯಾಸ.
– ರಾಮಕೃಷ್ಣ ಶೇಟ್ (ಸಾಮಾಜಿಕ ಕಾರ್ಯಕರ್ತ)
ಮೀನು-ಮಾಂಸ ಖರೀದಿ ಜೋರು:
ಕರ್ಫ್ಯೂ ಹಿನ್ನೆಲೆ ನಗರದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ್ದರಿಂದ ಮೀನು ಮಾರುಕಟ್ಟೆಯ ಮುಂಭಾಗದಲ್ಲಿಯೇ ಮೀನು ಮಾರಾಟಗಾರ ಮಹಿಳೆಯರು ವ್ಯಾಪಾರ ನಡೆಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಗ್ರಾಹಕರು ತಾಜಾ ಮೀನಿನ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು. ಅಲ್ಲದೇ, ವಿವಿಧ ಚಿಕನ್ ಅಂಗಡಿಗಳ ಮುಂಭಾಗದಲ್ಲೂ ಗ್ರಾಹಕರು ನೆರೆದಿರುವುದು ಸಾಮಾನ್ಯವಾಗಿತ್ತು.