ಕಾರವಾರ: ತಾಲೂಕಿನ ಕಡವಾಡ ಗ್ರಾಮದ ಕುಂಬಾರವಾಡಾದ ವಾಮನ ವೆಂಕಟೇಶ ಕಳಸ ಅವರು ರೈತರಲ್ಲಿಯೇ ಭಿನ್ನವಾಗಿ ಕಾಣುತ್ತಾರೆ.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿನ ಉದ್ಯೋಗಕ್ಕೂ ಮೊದಲು ತಂದೆ ವೆಂಕಟೇಶ (ಮಾಧು) ಕಳಸ ಜೊತೆ ಸೇರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಂತರ ನಿಷ್ಠಾವಂತ ನಿರ್ವಾಹಕರಾಗಿ ಹಲವು ನಿರ್ವಾಹಕರಾಗಿ ನಂತರ ಸಾರಿಗೆ ಬಸ್ ಘಟಕದಲ್ಲಿ ಸಂಚಾರ ನಿಯಂತ್ರಕರಾಗಿ ಬಡ್ತಿ ಪಡೆದು ನಿವೃತ್ತಿ ಹೊಂದಿದ್ದಾರೆ.
ನಾಲ್ಕು ಎಕರೆ ಜಮೀನಿನಲ್ಲಿ ಹಿಂಗಾರು ಮುಂಗಾರು ಹಂಗಾಮಿನಲ್ಲಿ ವಿವಿಧ ಬಗೆಯ ಭತ್ತ ಬೆಳೆಗಳನ್ನು ಉತ್ತಮವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಮಳೆಗಾಲದಲ್ಲಿ ಹೀರೆಕಾಯಿ ಸೌತೆಕಾಯಿ ಬೆಂಡೆಕಾಯಿ ಬೇಸಿಗೆಯ ಹಂಗಾಮಿನಲ್ಲಿ ತರಕಾರಿ ಬೆಳೆಗಳಾದ ಹರಿಗೆ ಕೆಂಪು ಸೊಪ್ಪು, ಮೂಲಂಗಿ, ಬದನೆಕಾಯಿ, ಹಾಲು ಸೊರೆಕಾಯಿ, ಬಿಳಿ ಸೊಪ್ಪು ಹೀಗೆ ವಿವಿಧ ಬಗೆಯ ಈಗ ತರಕಾರಿಗಳನ್ನು ಬೆಳೆದಿದ್ದಾರೆ.
ಜೊತೆಗೆ ದನಕರು ಎಮ್ಮೆಗಳು ಹೈನುಗಾರಿಕೆ ಸಾಗಾಣಿಕೆಯಲ್ಲಿ ಯಶಸ್ವಿಯಾಗಿ ಹಾಲು ಉತ್ಪನ್ನಗಳ ಜೊತೆ ಕೊಟ್ಟಿಗೆ ಗೊಬ್ಬರವನ್ನು ಬೇಸಾಯಕ್ಕೆ ಬಳಕೆ ಮಾಡಿಕೊಂಡು ವಿವಿಧ ಬಗೆಯ ಬೆಳೆಗಳನ್ನು ತೆಗೆದು ಸಫಲತೆ ಕಾಣುತ್ತಿದ್ದಾರೆ. ಈ ಹಿಂದೆ ಬಿಳಿ ಮತ್ತು ಕೆಂಪು ಗೆಣಸು, ಶೇಂಗಾ, ಉದ್ದು, ಕಲ್ಲಂಗಡಿ ಹಣ್ಣು ಬೆಳೆಸಿದ್ದರು.
ರೈತ ವಾಮನ ಕಳಸ ಅವರು ಕೃಷಿ ಯಂತ್ರೋಪಕರಣಗಳಾದ ಗದ್ದೆ ಉಳುಮೆ ಯಂತ್ರ, ಗದ್ದೆ ಕಟ್ಟಾವು ಯಂತ್ರ, ಕೀಟನಾಶಕ ಸಿಂಪಡಿಸುವ ಯಂತ್ರಗಳನ್ನು ತಮ್ಮಲ್ಲಿ ಇಟ್ಟುಕೊಂಡು ತಮ್ಮ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ಈಗ ಎರಡು ವಾರಗಳಿಂದ ಶೇಂಗಾ ಬೀಜ ಬಿತ್ತನೆಯಲ್ಲಿ ನಿರಂತರವಾಗಿದ್ದಾರೆ.
ಕಳೆದ ವರ್ಷ ಕೃಷಿ ಇಲಾಖೆಯವರು ಪ್ರಗತಿಪರ ರೈತ ವಾಮನ ಕಳಸ ಅವರ ಕೃಷಿ ಜಮೀನಿನಲ್ಲಿ ಭೇಟಿ ನೀಡಿ ಇವರ ಸಾಧನೆ ಪರಿಗಣಿಸಿ 2020-21 ನೇ ಸಾಲಿನ ಆತ್ಮ ಯೋಜನೆಯಡಿ ರೈತರು ದಿನಾಚರಣೆಯೆಂದು ತಾಲೂಕು ಮಟ್ಟದ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕೆಲವು ಸಂಘ ಸಂಸ್ಥೆಗಳು ರೈತ ವಾಮನ ಕಳಸ ಅವರನ್ನು ಸನ್ಮಾನಿಸಿವೆ.
ಇತ್ತೀಚೆಗೆ ಶಿರಸಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ವಿಕ ಸೂಪರ್ ಸ್ಟಾರ್ ರೈತ (ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದ್ದರು. ಒಟ್ಟಿನಲ್ಲಿ ಪ್ರಗತಿಪರ ರೈತ ವಾಮನ ಕಳಸ ಅವರ ಕೃಷಿ ಚಟುವಟಿಕೆ ಎಲ್ಲೆಡೆ ಗುರುತಿಸಿಕೊಂಡಿದೆ. – ರಾಜಾ ನಾಯ್ಕ