ಯಲ್ಲಾಪುರ: ಸರ್ಕಾರಕ್ಕೆ ರಾಜ್ಯ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಅರಿವಿದ್ದು ಅದನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಮ ಹೆಬ್ಬಾರ ಭರವಸೆ ನೀಡಿದರು.
ರವಿವಾರ ಅತಿಥಿ ಉಪನ್ಯಾಸಕರ ಪರವಾಗಿ ವಿನಂತಿ ಮಾಡಿದ ಯಲ್ಲಾಪುರ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರ ತಂಡದ ಜೊತೆಗೆ ಸಚಿವರು ವಿಸ್ತೃತ ಚರ್ಚೆ ನಡೆಸಿದರು. ಇಡೀ ರಾಜ್ಯದ ಅತಿಥಿ ಉಪನ್ಯಾಸಕರ ಸಮಸ್ಯೆ ಇದಾಗಿದ್ದು, ಅದನ್ನು ಬಗೆಹರಿಸಲು ತಾಂತ್ರಿಕತೊಂದರೆಯಿದೆ. ಆರ್ಥಿಕ ದೃಷ್ಟಿಯಿಂದ ನೋಡಿದಾಗ, ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿಗಿಂತ ಸ್ನಾತಕೋತ್ತರ ಪದವಿ ಪಡೆದಿರುವ ಉಪನ್ಯಾಸಕರ ಸ್ಥಿತಿ ಶೋಚನೀಯವಾಗಿದೆ. ಮಾನವೀಯ ದೃಷ್ಟಿಕೋನದಿಂದ ಸಮಸ್ಯೆ ಬಗೆಹರಿಸಲು ಈಗಾಗಲೇ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ಆಧಾರದ ಮೇಲೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ವಿವರಿಸಿದರು.