ಶಿರಸಿ: ಡಾ.ಎ.ಎನ್.ಪಟವರ್ಧನ್ ಫೌಂಡೇಶನ್, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ ಮಹಿಳಾ ಘಟಕ ಮತ್ತು ಗಾಣಿಗರ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 42 ಮಹಿಳೆಯರು ಪಾಲ್ಗೊಂಡು ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಪ್ರಶ್ನೆಗಳ ಮೂಲಕ ಸಂವಾದವನ್ನು ಅರ್ಥಪೂರ್ಣಗೊಳಿಸಿದರು.
ಮಹಿಳೆಯರು ತಾವೇ ಬರೆದು ಸುಶ್ರಾವ್ಯವಾಗಿ ಹಾಡಿದ ಸುಸ್ವಾಗತ ಗೀತೆಯೊಂದಿಗೆ ದೀಪವನ್ನು ಬೆಳಗಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಮಾಜದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು. ಫೌಂಡೇಶನ್ನಿನ ಟ್ರಸ್ಟಿ ಮತ್ತು ಲಯನ್ಸ್ ಕ್ಲಬ್ಬಿನ ಉಪಾಧ್ಯಕ್ಷ ತ್ರಿವಿಕ್ರಮ ಪಟವರ್ಧನರು ಮತ್ತು ಕ್ಲಬ್ಬಿನ ಕಾರ್ಯದರ್ಶಿ ಲಯನ್ ವಿನಯ್ ಹೆಗಡೆ ಶುಭಾಶಯ ಕೋರಿದರು.
ಮಹಿಳಾ ಘಟಕದ ಅಧ್ಯಕ್ಷೆ ಡಾ. ಆಶಾ ಪ್ರಭು ಮಹಿಳೆಯರು ಎದುರಿಸುವ ರೋಗಗಳ ಬಗ್ಗೆ ತಿಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು. ರಕ್ತಹೀನತೆ, ಗರ್ಭಿಣಿಯರ ಆರೋಗ್ಯ, ಋತುಚಕ್ರದ ಸಮಸ್ಯೆ, ಋತುಬಂಧದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ ಮುಂತಾದ ಅನೇಕ ವಿಷಯಗಳನ್ನು ವಿವರಿಸಿ ಮಹಿಳೆಯರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಘಟಕದ ಕಾರ್ಯದರ್ಶಿ ಡಾ. ಸ್ವಾತಿ ವಿನಾಯಕರು ಮಹಿಳೆಯರನ್ನು ಕಾಡುವ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರಿನ ಬಗ್ಗೆ ತಿಳಿಸಿ ಪಿಪಿಟಿ ಮೂಲಕ ಮನದಟ್ಟುವಂತೆ ವಿವರಿಸಿ ಆಸ್ಪತ್ರೆಯಲ್ಲಿ ಹೇಗೆ ಪರೀಕ್ಷಿಸಿ ರೋಗವನ್ನು ಪತ್ತೆಮಾಡುವರೆಂದು ತಿಳಿಸಿಕೊಟ್ಟರು. ಮಹಿಳೆಯರು ಮುಕ್ತಮನಸ್ಸಿನಿಂದ ಭಾಗವಹಿಸಿ ಅನೇಕ ವಿವರಗಳನ್ನು ಪಡೆದುಕೊಂಡರು. ಲಯನ್ ಸುಮಂಗಳಾ ಹೆಗಡೆ ವಂದನಾರ್ಪಣೆ ಮಾಡಿದರು. ಲಯನ್ಸ್ ಕ್ಲಬ್ಬಿನ ಮಹಿಳಾ ಸದಸ್ಯೆಯರು ಕಾರ್ಯವನ್ನು ಚಂದಗಾಣಿಸಿ ಕೊಟ್ಟರು. ಮಹಿಳಾ ಘಟಕದ ಸದಸ್ಯೆಯರು, ಸಮಾಜದ ದೇವಸ್ಥಾನದ ಅಧ್ಯಕ್ಷ ದೀಪಕ ಶೆಟ್ಟಿಯವರು ಉಪಸ್ಥಿತರಿದ್ದರು.