ಕಾರವಾರ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ವಾರಾಂತ್ಯದ ಕಫ್ರ್ಯೂಗೆ ಆದೇಶ ಹೊರಡಿಸಿದ್ದರಿಂದ ಮೊದಲ ದಿನವಾದ ಶನಿವಾರ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಾದ್ಯಂತ ಜನರ ಚಲನವಲನ, ವಾಹನ ಸಂಚಾರ ಎಂದಿಗಿಂತ ವಿರಳವಾಗಿತ್ತು. ಬೆಳಗಿನ ಅವಧಿಯಲ್ಲಿ ಕಫ್ರ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತಾದರೂ, ಮಧ್ಯಾಹ್ನ ಹಾಗೂ ಸಂಜೆಯ ಬಳಿಕ ಸ್ಥಿತಿ ಸಾಮಾನ್ಯವಾಗಿತ್ತು. ಕಫ್ರ್ಯೂ ಭಾಗವಾಗಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೀರಾ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ನಗರಸಭೆ ಅವಕಾಶ ಮಾಡಿಕೊಟ್ಟಿದ್ದರಿಂದ ತರಕಾರಿ, ಹೂವು, ಹಣ್ಣು, ಹಾಲು ಸೇರಿದಂತೆ ಕೆಲವು ದಿನಬಳಕೆಯ ಅತ್ಯಾವಶ್ಯಕ ವಸ್ತುಗಳ ಮಾರಾಟ ಸಾಧಾರಣವಾಗಿ ನಡೆದವು.
ಹೋಟೆಲ್ಗಳಲ್ಲಿ ಪಾರ್ಸಲ್ ವ್ಯವಸ್ಥೆ:
ವಾರಾಂತ್ಯದ ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಕುಳಿತು ತಿನ್ನಲು ಅವಕಾಶವಿರಲಿಲ್ಲ. ಇದರಿಂದ ಕೆಲವು ಕಚೇರಿ ಸಿಬ್ಬಂದಿಗಳು ಸೇರಿದಂತೆ ಅನಾರೋಗ್ಯ ಪೀಡಿತರು ಮತ್ತು ಅವರ ಕುಟುಂಬಸ್ಥರು ಪಾರ್ಸೆಲ್ ಪಡೆದು ವಿವಿಧ ಸ್ಥಳಗಳಲ್ಲಿ ಕುಳಿತು ತಿನ್ನುವ ದೃಶ್ಯ ಕಂಡುಬಂತು. ಕೆಲವರು ಝೊಮಾಟೊ ಮೊದಲಾದ ಕಂಪನಿಗಳ ಸೇವೆಗಳನ್ನು ಪಡೆದು, ಹಸಿವನ್ನು ನೀಗಿಸಿಕೊಂಡರು.
ಇಳಿಮುಖಗೊಂಡ ಬಸ್ ಸಂಚಾರ:
ಕಾರವಾರ ಡಿಪೋದಿಂದ ರಾಯಚೂರು, ಬಿಜಾಪುರ, ಬಳ್ಳಾರಿ, ಮಣಿಪಾಲ, ರಾಣೆಬೆನ್ನೂರು, ಬೆಳಗಾವಿ ಹಾಗೂ ಭಟ್ಕಳಕ್ಕೆ ಒಂದೊಂದು ಎಕ್ಸ್ಪ್ರೆಸ್ ಬಸ್ಗಳು ಸಂಚರಿಸಿವೆ. ಇದನ್ನು ಹೊರತುಪಡಿಸಿ ತಾಲೂಕಿನ ಮಾಜಾಳಿ, ಮೂಡಗೆರಿ, ಹೊಸಳ್ಳಿ, ದೇವಭಾಗ, ಕಡವಾಡ, ಮುದಗಾ, ಕದ್ರಾ, ಮಲ್ಲಾಪುರ, ಕೆರವಡಿ ಹಾಗೂ ತೋಡೂರಿಗೆ ಜನ ಸಂಖ್ಯೆಗೆ ಅನುಗುಣವಾಗಿ ಕೆಲವೇ ಕೆಲವು ಬಸ್ಗಳು ಸಂಚರಿಸಿವೆ. ಕೆಲವು ದೂರದೂರುಗಳಿಂದ ಆಗಮಿಸಿದ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಾನುವಾರದ ಬಸ್ ಸಂಚಾರ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್ಆರ್ಟಿಸಿ ಘಟಕ ತಿಳಿಸಿದೆ.
ಪೊಲೀಸರಿಂದ ತೀವ್ರ ತಪಾಸಣೆ:
ಬೆಳಿಗ್ಗೆ 10 ಗಂಟೆಯಿಂದ ಕಾರ್ಯಾಚರಣೆಗಿಳಿದ ಪೆÇಲೀಸರು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಅಲ್ಲದೇ, ನಗರದ ಸುಭಾಷ ಸರ್ಕಲ್, ಕುಟಿನೋ ರೋಡ್, ಡಿಸಿ ಕಚೇರಿ ಮುಂಭಾಗ, ಸವಿತಾ ಹೊಟೆಲ್ ಸರ್ಕಲ್, ಪಿಕಳೆ ರೋಡ್ ಸೇರಿದಂತೆ ಪ್ರಮುಖ ಹಾಗೂ ಉಪರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನ ಸವಾರರ ತೀವ್ರ ತಪಾಸಣೆ ನಡೆಸಿದರು. ಅನಗತ್ಯ ಸಂಚರಿಸುವವರಿಗೆ ಹಾಗೂ ಮಾಸ್ಕ್ ಧರಿಸದೇ ತೆರಳುತ್ತಿರುವವರಿಗೆ ದಂಡದ ಬಿಸಿಮುಟ್ಟಿಸಿದರು. ಗ್ರಾಮೀಣ ಠಾಣೆ, ಸಂಚಾರಿ ಠಾಣೆ ಹಾಗೂ ನಗರ ಠಾಣೆಯ ಪಿಎಸ್ಐಗಳು ತಮ್ಮ ಪೆÇಲೀಸ್ ಸಿಬ್ಬಂದಿಗಳೊಂದಿಗೆ ತಾಲೂಕಿನಾದ್ಯಂತ ಗಸ್ತು ತಿರುಗುತ್ತಿರುವುದು ಕಂಡುಬಂತು.
ಲಸಿಕೆ ಪಡೆಯಲು ಅವಕಾಶ:
ಕೋವಿಡ್-19 ಲಸಿಕೆ ಪಡೆಯಲು ವಾರಾಂತ್ಯದ ಕಫ್ರ್ಯೂ ಇದ್ದರೂ ಆರೋಗ್ಯ ಇಲಾಖೆ ಅವಕಾಶ ಕಲ್ಪಿಸಿರುವುದು ವಿಶೇಷವಾಗಿತ್ತು. ಆದರೆ ಪ್ರತಿದಿನಕ್ಕಿಂತ ಶೇ.50 ರಷ್ಟು ಮಂದಿ ಕಡಿಮೆ ಬಂದು ಲಸಿಕೆಪಡೆದುಕೊಂಡರು.
ತೆರೆದ ಅಗತ್ಯ ವಸ್ತುಗಳ ಅಂಗಡಿ:
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ತರಕಾರಿ, ಹಣ್ಣು, ಮೆಡಿಕಲ್, ಹಾಲಿನ ಉತ್ಪನ್ನ, ಕಿರಾಣಿ ಸೇರಿದಂತೆ ಅಗತ್ಯ ಜೀವನಾವಶ್ಯಕ ವಸ್ತುಗಳ ಅಂಗಡಿಗಳು ತೆರೆದಿದ್ದವು. ಗ್ರಾಹಕರು ಕೊರೊನಾ ನಿಯಮಗಳ ಪಾಲನೆಯೊಂದಿಗೆ ಅಂಗಡಿ ಮುಂಗಟ್ಟುಗಳಿಗೆ ತೆರಳಿ, ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿರುವುದು ಕಂಡುಬಂತು.
ಬಾಕ್ಸ್:
ಮೀನು ಮಾರುಕಟ್ಟೆಗೆ ಕೊರೊನಾ ನಿಯಮವಿಲ್ಲ?:
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶತಾಯಗತಾಯ ಹೋರಾಟ ನಡೆಸುತ್ತಿದ್ದರೂ ಇಲ್ಲಿನ ಮೀನು ಮಾರುಕಟ್ಟೆಗೆ ಅದು ಅನ್ವಯಿಸಿದಂತಿಲ್ಲ. ಶನಿವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಮೀನು ಮಾರುಕಟ್ಟೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಕೆಲವರು ಮಾಸ್ಕ್ ಧರಿಸದೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದರೆ, ಇನ್ನು ಕೆಲವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಂತಿತ್ತು. ಒಟ್ಟಾರೆ ಮೀನು ಮಾರುಕಟ್ಟೆ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು.
ಕೋಟ್:
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ವಾರಾಂತ್ಯದ ಕಫ್ರ್ಯೂಗೆ ಸಾರ್ವಜನಿಕರು ಸಹಕರಿಸಬೇಕು. ಅನಾವಶ್ಯಕ ಸಂಚರಿಸುವುದು ಹಾಗೂ ಕೋವಿಡ್ ನಿಯಮ ಉಲ್ಲಂಘಿಸುವುದು ಕಂಡುಬಂದಲ್ಲಿ ಕಾನೂನು ಕ್ರಮಜರುಗಿಸಲಾಗುದುವು.