ಕಾರವಾರ: ಘಡಸಾಯಿ ಪಂಚಾಯಿತಿ ಹಳಗೆಜೂಗ್ ಪಂಚಾಯಿತಿ ಮರುಚುನಾವಣೆಯಲ್ಲಿ ವಿಜಯಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಗೇಶ್ ಗೋವೇಕರ್ ಅವರನ್ನು ಊರ ನಾಗರಿಕರು ಮಾಜಿ ಶಾಸಕ ಸತೀಶ್ ಸೈಲ್ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.
ನೂತನ ಸದಸ್ಯ ಮಂಗೇಶ್ ಗೋವೇಕರ್ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿ, ಹಳಗೆಜೂಗ್ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆ ಸಣ್ಣ ನೀರಾವರಿ ಸಮಸ್ಯೆ, ನಿರುದ್ಯೋಗಿ ಯುವಕರ ಸಮಸ್ಯೆ ಮುಂತಾದವುಗಳನ್ನು ಮಾಜಿ ಶಾಸಕರ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು.
ಈ ಸಮಯದಲ್ಲಿ ಊರ ನಾಗರಿಕರು ತಮ್ಮ ಊರಿಗೆ ಸತೀಶ್ ಸೈಲ್ ತಮ್ಮ ಅವಧಿಯಲ್ಲಿ ನಡೆಸಿದ್ದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ಮರಿಸಿ ಅವರನ್ನು ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಸತೀಶ್ ಸೈಲ್ ಊರಿನ ಜನರಲ್ಲಿ ಒಗ್ಗಟ್ಟು ಅವಶ್ಯಕ. ಪಕ್ಷ ರಾಜಕಾರಣ ಚುನಾವಣಾ ಸಮಯಕ್ಕೆ ಮಾತ್ರ ಮೀಸಲಿಟ್ಟು, ನಂತರ ಊರಿನ ಅಭಿವೃದ್ಧಿಗೆ ಒಗ್ಗಟ್ಟಿನಲ್ಲಿ ಹೋರಾಡಬೇಕು. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ರಸ್ತೆ ತಡೆ ಮುಂತಾದ ಹೋರಾಟಗಳನ್ನು ನಡೆಸಿ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದರು.
ವಿದ್ಯುತ್ ಟ್ರಾನ್ಸ್ಫಾರ್ಮರ್ ಮತ್ತು ಸಣ್ಣ ನೀರಾವರಿ ಅಧಿಕಾರಿಗಳನ್ನು ಸ್ಥಳದಲ್ಲಿಯೇ ದೂರವಾಣಿ ಮುಖಾಂತರ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಕುರಿತು ಸಲಹೆ ಸೂಚನೆ ನೀಡಿದರು.
ಪಂಚಾಯಿತಿ ಸದಸ್ಯರಾದ ಚಂದಾ ನಾಯ್ಕ, ಅನಿತಾ ಹಳ್ಗೇಕರ, ದಿವ್ಯಾ ಕುಡಾಲ್ಕರ, ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ಶಂಭು ಶೆಟ್ಟಿ,
ಪಂಚಾಯಿತಿ ಮಾಜಿ ಅಧ್ಯಕ್ಷ ವಿಷ್ಣು ರಾಣೆ, ಸುನೀಲ್ದತ್ ರಾಣೆ, ಅನಂದು ಹಲಗೇಕರ್, ರಾಮದಾಸ ಗೋವೇಕರ, ಮಂದಾರ ನಾಯ್ಕ ಮತ್ತು ಊರಿನ ನೂರಾರು ನಾಗರಿಕರು ಸೇರಿದ್ದರು.