ದಾಂಡೇಲಿ: ಅಂತಾರಾಷ್ಟ್ರೀಯ ಮಟ್ಟದ ಜಾದು ಪ್ರದರ್ಶನಗಾರ ಎಂ.ಡಿ. ಕೌಶಿಕ್ ಅವರು ಶುಕ್ರವಾರ ಸಂಜೆ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ನಡೆಸಿಕೊಟ್ಟ ಜಾದು ಪ್ರದರ್ಶನ ಜನಮನ ಸೂರೆಗೊಂಡಿತು.
ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುರಿತ ಇಂದ್ರಜಾಲ ವಿದ್ಯೆ ಪ್ರದರ್ಶನಕಾರ ಎಂ.ಡಿ ಕೌಶಿಕ ಮತ್ತು ಅವರ ಸಂಗಡಿಗರು ಇಂದ್ರಜಾಲ ವಿದ್ಯೆ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಇಂದ್ರಜಾಲ ವಿದ್ಯೆಯ ಪ್ರದರ್ಶನಕ್ಕೆ ಅನುಗುಣವಾಗಿ ಸಮಾಜಕ್ಕೆ ಸಂದೇಶ ನೀಡುವಂತಹ ಮಾತುಗಳು ಜಾದು ಪ್ರದರ್ಶನಕ್ಕೆ ಮೆರಗು ನೀಡಿದವು. ಬಟ್ಟೆಯ ಕವಚದ ನಡುವೆ ಯುವತಿ ಧರಿಸಿದ್ದ ಬಟ್ಟೆ ಕ್ಷಣ ಮಾತ್ರದಲ್ಲಿ ಬದಲಾಗಿ ಯುವತಿ ಬೇರೆ ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದುನ್ನು ಕಂಡು ಪ್ರೇಕ್ಷಕರು ಮೂಕವಿಸ್ಮಿತರಾದರು.
ಹಾಗೆಯೇ ಮಕ್ಕಳ ಆಟಿಕೆಗೆ ಪೂರಕವಾದ ವಿಶೇಷ ಬಲೂನಿನಿಂದ ವಿವಿಧ ರೀತಿಯ ಆಕೃತಿಗಳನ್ನು ಕ್ಷಣಮಾತ್ರದಲ್ಲಿ ರಚಿಸುವುದನ್ನು ಪ್ರದರ್ಶಿಸಿ ಮಕ್ಕಳ ಬುದ್ಧ್ದಿವಂತಿಕೆಗೆ ಸಹಾಯಕಾರಿ ಆಗುತ್ತದೆ ಎನ್ನುವ ಸಂದೇಶವನ್ನು ನೀಡಿದರು. ಹೀಗೆಯೇ ಹಲವಾರ ರೀತಿಯ ಜಾದೂ ಪ್ರದರ್ಶನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ನೆಚ್ಚಿನ ಜಾದೂಗಾರನೊಂದಿಗೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಧಾವಿಸಿದರು. ಇದಕ್ಕೂ ಮೊದಲು ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕಾಧ್ಯಕ್ಷರ ನೇಮಕಕ್ಕೆ ಸಂಬಂಧ ಪಟ್ಟಂತೆ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ. ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಯು.ಎಸ್. ಪಾಟೀಲ, ಕರ್ನಾಟಕ ಸಂಘದ ಕಾರ್ಯದರ್ಶಿ ಮುರ್ತುಜಾ ಹುಸೇನ್ ಆನೆಹೊಸುರ, ಗುರುಶಾಂತ ಜಡೆಹಿರೇಮಠ, ಪ್ರವೀಣಕುಮಾರ ಸುಲಾಖೆ, ಅಕ್ಷಯ ಗೋಸಾವಿ, ನಗರಸಭೆ ಸದಸ್ಯ ಮೋಹನ ಹಲವಾಯಿ, ಸೇರಿದಂತೆ ಅನೇಕರು ಉಪಸ್ಥಿರಿದ್ದರು.