ಅಂಕೋಲಾ: ಸಾಹಿತಿಗಳು ರಚಿಸುವ ಕೃತಿಗಳನ್ನು ನಾವು ಓದುವುದೇ ಅವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ. ಹಾರ, ಶಾಲುಗಳನ್ನು ಹಾಕಿದಾಗ ಆಗುವ ಸಂತೋಷಕ್ಕಿಂತ ನಮ್ಮ ಕೃತಿಗಳು ಹೆಚ್ಚು ಹೆಚ್ಚು ಜನರಿಗೆ ತಲುಪಿದಾಗ ಆಗುವ ಸಂತೃಪ್ತಿಯ ಹೆಚ್ಚು ಎಂದು ಜಿಲ್ಲೆಯ ಹಿರಿಯ ಸಾಹಿತಿ ಜಾನಪದ ದಿಗ್ಗಜ ಡಾ. ಎನ್.ಆರ್. ನಾಯಕ ಅಭಿಪ್ರಾಯಪಟ್ಟರು.
ಅವರು ಅಂಕೋಲೆಯ ಗೆಳೆಯರ ಬಳಗದವರು ಎನ್.ಆರ್. ನಾಯಕರ ಹೊನ್ನಾವರ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಆತ್ಮೀಯವಾಗಿ ಗೌರವಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ, ಡಾ. ಎನ್.ಆರ್. ನಾಯಕರ ಬದುಕು, ಬರಹ ಕುರಿತು ಜಿಲ್ಲೆಯಾದ್ಯಂತ ವಿಚಾರ ಸಂಕಿರಣ ಏರ್ಪಡಿಸುವ ಅವಶ್ಯಕತೆಯಿದ್ದು, ಕಸಾಪದಂತಹ ಸಂಸ್ಥೆಗಳು ಗಮನ ಹರಿಸಬೇಕೆಂದರು.
ಶಿಕ್ಷಕ ಮಂಜುನಾಥ ಬರ್ಗಿ ಮಾತನಾಡಿ, ನಾಯಕರ ಸಾಹಿತ್ಯಕ್ಕೆ ತಾಳಿಕೆ, ಬಾಳಿಕೆ ಗುಣವಿದೆಯೆಂದರು.
ನಾಯಕರು ಒಂದು ಇಡೀ ವಿಶ್ವವಿದ್ಯಾಲಯ ಮಾಡುವಷ್ಟು ಕಾರ್ಯವನ್ನು ಮಾಡಿದ್ದರೆಂದು ಡಾ. ರಾಮಕೃಷ್ಣ ಗುಂದಿ ಅಭಿಪ್ರಾಯಪಟ್ಟರು.
ಅಂಕೋಲೆಯ ಗೆಳೆಯರ ಬಳಗದ ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ, ನಾಗೇಂದ್ರ ತೊರ್ಕೆ, ನಿವೃತ್ತ ಪ್ರಾಚಾರ್ಯ ವಿ.ಎಸ್. ವೆರ್ಣೇಕರ, ಸುಮುಖಾನಂದ ಜಲವಳ್ಳಿ ಹಾಗೂ ಮಹಾಂತೇಶ ರೇವಡಿ ಉಪಸ್ಥಿತರಿದ್ದರು.