ಭಟ್ಕಳ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್ ಸರಕಾರ ಸೂಕ್ತ ಭದ್ರತೆ ಒದಗಿಸಲು ವಿಫಲವಾಗಿದ್ದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ತಾಲೂಕು ಬಿಜೆಪಿ ಘಟಕದಿಂದ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಸಲಾಯಿತು.
ನಗರದ ಪ್ರವಾಸಿ ಮಂದಿರದ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಮಿನಿ ವಿಧಾನ ಸೌಧದವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಪಂಜಾಬ್ ಸರಕಾರದ ವಿರುದ್ದ ಘೊಷಣೆ ಕೂಗಿದರು.
ಜ.5ರಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ರಾಜ್ಯದ ಪ್ರವಾಸದಲ್ಲಿದ್ದಾಗ ಉದ್ದೇಶ ಪೂರ್ವಕವಾಗಿ ಸೂಕ್ತ ಭದ್ರತೆ ನೀಡದೇ ಪ್ರಧಾನ ಮಂತ್ರಿಗಳ ಕಾರು ಪಾಕಿಸ್ತಾನ ದೇಶದ ಗಡಿಯ ಹತ್ತಿರ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸುಮಾರು 20 ನಿಮಿಷ ಕಾಯುವಂತೆ ಮಾಡಿ ದೇಶದ ಪ್ರಧಾನಿಯವರ ಜೀವಕ್ಕೆ ಗಂಡಾಂತರ ತರಲು ಯೋಜಿಸಿದ್ದಾರೆ. ಪಂಜಾಬ್ ಸರಕಾರ ಈ ರೀತಿ ಭದ್ರತಾ ವೈಫಲ್ಯವನ್ನು ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೆಲ್ನೋಟಕ್ಕೆ ಕಂಡುಬರುತ್ತಿದ್ದು ಪಂಜಾಬ್ ಸರಕಾರದ ನಡೆ ತೀರ ಗಂಡಾಂತರಕಾರಿಯಾಗಿದೆ.
ಆದ್ದರಿಂದ ಪಂಜಾಬಿನ ಚರಣಜಿತ್ ಸಿಂಗ್ ಚೆನ್ನಿ ನೇತ್ರತ್ವದ ಕಾಂಗ್ರೇಸ್ ಸರಕಾರವನ್ನು ವಜಾಗೊಳಿಸಿ ಷಡ್ಯಂತ್ರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಭಟ್ಕಳ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಮುಖರಾದ ಶಿವಾನಿ ಶಾಂತಾರಾಮ, ರವಿ ನಾಯ್ಕ ಜಾಲಿ, ಲಕ್ಷ್ಮೀ ನಾರಾಯಣ ನಾಯ್ಕ, ಭಾಸ್ಕರ ದೈಮನೆ, ಸಂತೋಷ ನಾಯ್ಕ, ರಾಘವೇಂದ್ರ ಶೇಟ್, ವೆಂಕಟೇಶ ನಾಯ್ಕ, ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.