ಅಂಕೋಲಾ : ಮೀನು ಕರಾವಳಿ ಜನರ ಪ್ರಮುಖ ಆಹಾರವಾದ್ದರಿಂದ ಮೀನು ಹಾಗೂ ಸಮುದ್ರದ ಇತರೆ ಉತ್ಪನ್ನಗಳನ್ನು ಆಹಾರವಾಗಿ ಬಳಸುವದರ ಜೊತೆಗೆ ನೀಲಿಕಲ್ಲು ಮತ್ತು ಕಲಗ ಮುಂತಾದವುಗಳನ್ನು ಬೆಳೆಸಿ ಲಾಭ ಪಡೆದು ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಹೇಳಿದರು.
ಅವರು ತಾಲೂಕಿನ ಬೇಳಾ ಬಂದರಿನ ನದಿಯಲ್ಲಿ ಕೋಸ್ಟಲ್ ಮತ್ತು ಮರೈನ್ ಇಕೋ ಸಿಸ್ಟಮ್ ಘಟಕ ಕಾರವಾರ ಆಶ್ರಯದಲ್ಲಿ ನೀಲಿಕಲ್ಲು ಮತ್ತು ಕಲಗ ಕೃಷಿ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗು ಕಡಲ ಜೀವ ವೈವಿಧ್ಯತೆ ಸಂರಕ್ಷಣೆ ಬಗ್ಗೆ ಜಾಗ್ರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೀನುಗಾರಿಕೆಯು ಎಷ್ಟೋ ಕುಟುಂಬಗಳಿಗೆ ಜೀವನಾಧಾರವಾಗಿ ಆದಾಯ ತರುವ ಯೋಜನೆಯಾಗಿದ್ದು, ಈಗ ನೀಲಿಕಲ್ಲು ಮತ್ತು ಕಲಗ ಕೃಷಿ ಆರಂಭವಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಲು ಸ್ಥಳೀಯರ ಸಹಾಕಾರ ಅಗತ್ಯ ಎಂದರು.
ವಿಜ್ಞಾನಿ ಅಪೂರ್ವಾ ಕುಲಕರ್ಣಿ ಮಾತನಾಡಿ ಆಹಾರ ಪದಾರ್ಥವಾಗಿರುವ ನೀಲಿಕಲ್ಲು ಮತ್ತು ಕಲಗ ಕೃಷಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು ಇದರ ಬೆಳವಣಿಗೆ ಆಧರಿಸಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಜವಾಬ್ದಾರಿಯನ್ನು ತೆಗೆದುಕೊಂಡು ಈ ಕೆಲಸಕ್ಕೆ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಹೊಸ ಹೊಸ ಆವಿಷ್ಕಾರ ಕೈಗೊಳ್ಳಲಾಗುವದು ಎಂದರು.
ನ್ಯಾಯವಾದಿ ಉಮೇಶ್ ನಾಯ್ಕ ಮಾತನಾಡಿ ಯಾವುದೇ ಯೋಜನೆಗಳನ್ನು ಆರಂಭಿಸುವ ಮುನ್ನ ಇದರ ನಿರ್ವಹಣೆಯ ಜವಾಬ್ದಾರಿ ಇರಬೇಕು. ಈ ಯೋಜನೆ ಇಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆ. ಆದರೆ ಕಾಳಜಿ ಅಗತ್ಯ ಎಂದರು.
ಅರಣ್ಯ ಇಲಾಖೆಯ ಕೋಸ್ಟಲ್ & ಮರೈನ್ ಇಕೋ ಸಿಸ್ಟಮನ ಕಾರವಾರ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಮೋದ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಕಟ್ಟಿಮನಿ ಸ್ವಾಗತಿಸಿದರು. ವೇದಿಕೆಯಲ್ಲಿ ಬೊಬ್ರುವಾಡಾ ಗ್ರಾಪಂ ಸದಸ್ಯ ರವಿ ನಾಯ್ಕ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ವಿನುತಾ ನಾಯಕ, ಸಹ ಶಿಕ್ಷಕಿ ಸುಮನಾ ನಾಯಕ, ಸ್ವ ಸಹಾಯ ಸಂಘದ ಪ್ರತಿನಿಧಿಗಳು. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೊಬ್ರುವಾಡಾ ಗ್ರಾಪಂ ಮಾಜಿ ಅಧ್ಯಕ್ಷ ಅನಿಲ ನಾಯ್ಕ,ಮರೈನ ಅಂಕೋಲಾದ ಅಧಿಕಾರಿ ಅಭಿಷೇಕ್ ಡಿ, ಶಾಲಾ ವಿದ್ಯಾರ್ಥಿಗಳು, ಐಟಿಐ ಕಾಲೇಜು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.