ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ 8 ವರ್ಷಗಳಿಂದ ಒಟ್ಟಾರೆ 60 ಲಕ್ಷ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾನೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಏನು ಕ್ರಮ ಕೈಗೊಳ್ಳಿಲ್ಲ ಎಂದು ಮುಂಡಳ್ಳಿ ಪಂಚಾಯತ ಸದಸ್ಯ ರಾಜು ನಾಯ್ಕ ಆರೋಪಿಸಿದರು.
ಅವರು ಇಲ್ಲಿನ ಮುಂಡಳ್ಳಿ ಗಣೇಶೋತ್ಸವ ಸಮಿತಿ ಆವರಣದಲ್ಲಿ ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಖಾಸಗಿ ಬ್ಯಾಂಕ್ ಉದ್ಯೋಗಿಯೋರ್ವ ಕಳೆದ ಹಲವಾರು ವರ್ಷಗಳಿಂದ ಕಾನೂನುಬಾಹಿರವಾಗಿ ಯುವಕ ಸಂಘದ ಅಧ್ಯಕ್ಷ ಹುದ್ದೆಯಲ್ಲಿ ಇದ್ದು ಅಕ್ರಮ ಖಾತೆ ತೆರೆದು 60 ಲಕ್ಷ ರೂಪಾಯಿ ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಗುಮಾಸ್ತನೊಂದಿಗೆ ಸೇರಿ ಈ ಬಗ್ಗೆ ಎಲ್ಲ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ ಅಧ್ಯಕ್ಷ ನಾಗಪ್ಪ ನಾಯ್ಕ ಅವರು ತಹಸೀಲ್ದಾರ್ ಭಟ್ಕಳ ಅವರಿಗೆ ತನಿಖೆ ನಡೆಸಿ ಕ್ರಮ ಕೈಗೊಳಬೇಕೆಂದು ದೂರು ನೀಡಿ ತಿಂಗಳುಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ನ್ಯಾಯ ಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿರುವುದು ದಾಖಲೆ ಸಮೇತ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಮುಂಡಳ್ಳಿ ನ್ಯಾಯಬೆಲೆ ಅಂಗಡಿಯ ಸಾಮಗ್ರಿಗಳನ್ನು ಮತ್ತು ಧಾನ್ಯಗಳನ್ನು ಕದ್ದು ಹೊರಗಡೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಮೀನುಗಾರರಿಗೆ ದೋಣಿಯ ಸೀಮೆ ಎಣ್ಣೆ ಯನ್ನು ಸರಕಾರ ನಿಗದಿಪಡಿಸಿದ ಲೀಟರ್ ಎಣ್ಣೆಗಿಂತ 10 ಲೀಟರ್ ಎಣ್ಣೆ ಕಡಿಮೆ ನೀಡುತ್ತಿದ್ದು ಗುಮಾಸ್ತನು ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯುತಿಲ್ಲ. ಹಾಗೂ ಸದ್ಯ ಈತನು ಮುಂಡಳ್ಳಿ ಗ್ರಾಮ ಪಂಚಾಯತ ನ ಹಾಲಿ ಸದಸ್ಯನಾಗಿದ್ದು ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯುತಿಲ್ಲ ಎಂದು ತಹಸೀಲ್ದಾರರಿಗೆ ತನಿಖೆ ನಡೆಸುವಂತೆ ದೂರು ಸಹ ನೀಡಲಾಗಿದೆ ಎಂದರು.
ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ಮತ್ತು ಅವ್ಯವಹಾರವನ್ನು ಯಾರಾದರೂ ಗ್ರಾಮಸ್ಥರು ಗುಮಾಸ್ತನ ಬಳಿ ಪ್ರಶ್ನೆ ಮಾಡಿದರೆ ಈತನು ತನ್ನ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತ ಜನರನ್ನು ಬೆದರಿಸುವುದು ಮತ್ತು ಜನರಿಗೆ ಹೊಡೆಯುವುದು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು, ನಿಪಕ್ಷಪಾತವಾಗಿ ತಹಶೀಲ್ದಾರರು ತನಿಖೆ ನಡೆಸುವಂತೆ ಮನವಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಗುಮಾಸ್ತನ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ಪಂಚಾಯತ್ ವತಿಯಿಂದ ತಹಶೀಲ್ದಾರರಿಗೆ ಮನವಿ ನೀಡಿ ಎಷ್ಟೇ ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ , ಅಧಿಕಾರಿಗಳ ಈ ನಡೆ ನೋಡಿದರೆ ತಮಗೆ ಅಧಿಕಾರಿಗಳು ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಮೂಡುತ್ತಿದೆ ಎಂದು ಆರೋಪಿಸಿದ ಅವರು ತಹಸೀಲ್ದಾರ್ ರು 60 ಲಕ್ಷ ಭ್ರಷ್ಟಾಚಾರ ನಡೆಸಿರುವ ಭ್ರಷ್ಟಾಚಾರಿಗಳ ರಕ್ಷಣೆ ಮಾಡಿ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಪ್ಪ ನಾಯ್ಕ ಮಾತನಾಡಿ ‘ಆಗಸ್ಟ್ 19 2011 ರಿಂದ ಯುವಕ ಮಂಡಲ ಮಂಡಳಿಯ ಮಾನ್ಯತೆ ನವೀಕರಣಗೊಂಡಿಲ್ಲ. 2016 ರಿಂದ ಯಾವುದೇ ಆಡಿಟ್ ಆಗಿಲ್ಲ ಎಂದು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಕೇಳಿದ ಮಾಹಿತಿ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಆಹಾರ ಮತ್ತು ನಾಗರಿಕ ಇಲಾಖೆ ಜಿಲ್ಲಾ ಡಿ.ಡಿ., ಭಟ್ಕಳ ಸಹಾಯಕ ಆಯುಕ್ತರು , ಜಿಲ್ಲಾ ಯುವಜನ ಸೇವಾ ಕ್ರೀಡಾ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ನಾವು ತನಿಖೆಗೆ ಒಂದು ವಾರದ ಗಡುವು ನೀಡುತ್ತಿದ್ದು ಅಧಿಕಾರಿಗಳು ಶೀಘ್ರದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ ‘1 ವಾರದೊಳಗೆ ತಹಶೀಲ್ದಾರರು ಸಮಸ್ಯೆ ಬಗೆಹರಿಸಿ, ನ್ಯಾಯ ದೊರಕಿಸಿಕೊಡದಿದ್ದಲ್ಲಿ ಭಟ್ಕಳ ತಹಸೀಲ್ದಾರ ಕಚೇರಿ ಎದುರುಗಡೆ ಅರೆ ಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಅವರು ಶಾಸಕರಿಗೆ ಮತ್ತು ಸಹಾಯಕ ಆಯುಕ್ತರ ಗಮನಕ್ಕೆ ಮತ್ತೆ ಈ ಪ್ರಕರಣ ತರುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಯುವಕ ಮಂಡಲ ಹೊಸ ಸಮಿತಿ ಅಧ್ಯಕ್ಷ ಅರುಣ ನಾಯ್ಕ, ಸಮಿತಿ ಸದಸ್ಯರು ಮುಂತಾದವರಿದ್ದರು.