• first
  second
  third
  Slide
  previous arrow
  next arrow
 • 12 ರಂದು ಮೊಗೇರ ಸಮಾಜದವರಿಂದ ಧರಣಿ ಸತ್ಯಾಗ್ರಹ ನಿರ್ಧಾರ; ಸುದ್ದಿಗೋಷ್ಠಿಯಲ್ಲಿ ಕೆ.ಎಂ. ಕರ್ಕಿ ಮಾಹಿತಿ

  300x250 AD  ಭಟ್ಕಳ: ಮೊಗೇರ ಸಮಾಜಕ್ಕೆ ದೊರೆತ ಸೌಲಭ್ಯ ವಂಚಿಸಲು ಕೆಲವು ಸಂಘಟನೆಗಳು ಹಲವಾರು ರೀತಿಯಲ್ಲಿ ಅಪಪ್ರಚಾರ ಮಾಡಿ, ಸಮಾಜದಲ್ಲಿ ಮತ್ತು ಸರಕಾರಿ ಅಧಿಕಾರಿಗಳಲ್ಲಿ ಸಂಶಯ ಮೂಡುವಂತೆ ಮಾಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಂ. ಕರ್ಕಿ ಹೇಳಿದರು.

  ಅವರು ವೆಂಕಟಾಪುರದ ಶ್ರೀನಿವಾಸ ಸಬಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾವು ಇಲ್ಲಿಯವರೆಗೆ ತಾಳ್ಮೆ ಮತ್ತು ಶಾಂತತೆಯನ್ನು ಪಾಲಿಸಿಕೊಂಡು ಬಂದಿದ್ದೇವೆ. ನಾವು ಯಾರ ಆಸ್ತಿಯನ್ನೂ ಕಬಳಿಸಿಲ್ಲ, ನಾವು ಯಾರನ್ನೂ ದೂಷಿಸುತ್ತಿಲ್ಲ. ನಮ್ಮ ಮೊಗೇರ ಸಮಾಜದವರಿಗೆ ನ್ಯಾಯಯುತವಾಗಿ ಸಿಗುವ ಸೌಲಭ್ಯವನ್ನು ತಡೆಹಿಡಿದಿರುವ ಬಗ್ಗೆ ಜ. 12 ರಂದು ಭಟ್ಕಳ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ” ಎಂದರು.

  ಕರ್ನಾಟಕದಲ್ಲಿ ವಾಸಿಸುವ ಮೊಗೇರ ಜನಾಂಗಕ್ಕೆ ಪರಿಶಿಷ್ಟ ಜಾತಿಯ ಸೌಲಭ್ಯವನ್ನು 1976 ರಿಂದ ಪ್ರಾಂತೀಯ ನಿರ್ಬಂಧ ತೆಗೆದು ಕರ್ನಾಟಕದ ಎಲ್ಲ ಪ್ರದೇಶದಲ್ಲಿ ವಾಸಿಸುವ ಮೊಗೇರ ಜನಾಂಗಕ್ಕೆ ವಿಸ್ತರಿಸಲಾಯಿತು. ಹಿಂದುಳಿದ ವರ್ಗದಲ್ಲಿದ್ದ ಮೊಗೇರ ಜಾತಿಯನ್ನು ಕೈಬಿಟ್ಟು ಆದೇಶ ಹೊರಡಿಸಲಾಗಿತ್ತು. ಉತ್ತರಕನ್ನಡ ಜಿಲ್ಲೆಯ ಮೊಗೇರ ಜಾತಿಯ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗಗಳು ತಮ್ಮ ಆದೇಶದಲ್ಲಿ ಪರಿಶಿಷ್ಟರೆಂದು ಸ್ಪಷ್ಟಪಡಿಸಿವೆ.

  ಕರ್ನಾಟಕ ಸರಕಾರ 2018ರ ಮೇ 31ರಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ತನ್ನ ಆದೇಶದ ಪ್ರಕಾರ ಮೊಗೇರ ಜಾತಿಯು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗ ಎರಡರಲ್ಲಿಯೂ ಇರುವುದರಿಂದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಾಗ ಪರಿಶೀಲಿಸಿ ನೀಡಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗಿ ಸರಕಾರ ತನ್ನ ಸುತ್ತೋಲೆ ಹಿಂಪಡೆದು 2019ರ ನ.4 ರಂದು ಕರ್ನಾಟಕದಲ್ಲಿರುವ ಮೊಗೇರ ಜಾತಿಯವರಿಗೆ ಪರಿಶಿಷ್ಟ ಜಾತಿಯ ಸೌಲಭ್ಯವನ್ನು ವಿಸ್ತರಿಸಲು ಸುತ್ತೋಲೆ ಹೊರಡಿಸಿದೆ.
  ಹೀಗೆ ಸ್ಪಷ್ಟ ಆದೇಶವಿದ್ದರೂ ಉತ್ತರಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ 2019ರ ಡಿ.20 ರಂದು ಉತ್ತರಕನ್ನಡ ಜಿಲ್ಲೆಯಲ್ಲಿ ವಾಸಿಸುವ ಮೊಗೇರರು ಮೀನುಗಾರ ಕಸುಬಿನವರೆಂದು, ಶಾಲಾ ದಾಖಲಾತಿಗಳಲ್ಲಿ ಪರಿಶಿಷ್ಟ ಜಾತಿಯೆಂದು ನಮೂದಾಗಿರುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ತಹಸೀಲ್ದಾರ್‍ಗಳಿಗೆ ರವಾನಿಸಿ ಪರಿಶಿಷ್ಟ ಜಾತಿ ಸೌಲಭ್ಯ ತಡೆಹಿಡಿದಿದೆ.

  300x250 AD

  ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದೇ ಸರಕಾರದ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೊಗೇರ ಜನಾಂಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸುತ್ತಿರುವುದು ಸಮಾಜದ ಜನರ ಮೆಲೆ ಸರಕಾರಿ ದೌರ್ಜನ್ಯವಾಗಿದ್ದು ಇದು ಖಂಡನೀಯ.
  ಸದ್ಯ ಜಾಲಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊಗೇರ ಸಮಾಜದ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರವನ್ನು ಅವಸರದಲ್ಲಿ ರದ್ದುಗೊಳಿಸಿರುವುದು ಸಾಮಾಜಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಸಮಾಜದವರ ಮೇಲೆ ಅನ್ಯಾಯವಾಗಿ ನಡೆಯುತ್ತಿರುವ ಕಾನೂನು ಬಾಹಿರ ಕ್ರಮಗಳ ವಿರುದ್ಧ ಹಾಗೂ ಪರಿಶಿಷ್ಟ ಜಾತಿಯ ನ್ಯಾಯಯುತ ಸೌಲಭ್ಯ ಪಡೆಯಲು ಧರಣಿ ಸತ್ಯಾಗ್ರಹ ನಡೆಸಲು ಸಮಾಜದ ನಿರ್ಧರಿಸಿದ್ದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಭಟ್ಕಳ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

  ತಾಲೂಕು ಅಧಕ್ಷ ಅಣ್ಣಪ್ಪ ಮೊಗೇರ, ಪ್ರಮುಖರಾದ ದಾಸಿ ಮೊಗೇರ, ಅನಂತ ಮೊಗೇರ, ಜಟ್ಕ ಮೊಗೇರ, ವೆಂಕಟ್ರಮಣ ಮೊಗೇರ, ಎಫ್.ಕೆ.ಮೊಗೇರ, ಪುಂಡಲೀಕ ಹೆಬಳೆ, ಕೃಷ್ಣ ಮೊಗೇರ ಹೊನ್ನೆಗದ್ದೆ, ಭಾಸ್ಕರ ದೈಮನೆ, ಶಂಕರ ಹೆಬಳೆ ಮತ್ತಿತರರು ಇದ್ದರು.

  Share This
  300x250 AD
  300x250 AD
  300x250 AD
  Back to top